ADVERTISEMENT

ಕಪ್ಪು ಹಣ: ಸ್ವಿಟ್ಜರ್ಲೆಂಡ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2012, 19:30 IST
Last Updated 16 ಫೆಬ್ರುವರಿ 2012, 19:30 IST

 ನವದೆಹಲಿ (ಪಿಟಿಐ): ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರೇ ಅತಿ ಹೆಚ್ಚಿನ ಸಂಖ್ಯೆಯ ಠೇವಣಿದಾರರು ಎಂದು ಸಿಬಿಐ ನಿರ್ದೇಶಕರು ಹೇಳಿಕೆ ನೀಡಿದ ಬೆನ್ನಲ್ಲಿಯೇ, `ಇಂಥ ಅಭಿಪ್ರಾಯಗಳು ಹಾಗೂ ಅಂಕಿಅಂಶಗಳಿಗೆ ಪುರಾವೆಗಳ ಕೊರತೆ ಇದೆ ಹಾಗೂ ಇವು ಸಮರ್ಥನೀಯವಲ್ಲ~ ಎಂದು ಸ್ವಿಟ್ಜರ್ಲೆಂಡ್ ಗುರುವಾರ ಸ್ಪಷ್ಟಪಡಿಸಿದೆ.

ಸ್ವಿಟ್ಜರ್ಲೆಂಡ್ ಹಾಗೂ ಸ್ವಿಸ್ ಬ್ಯಾಂಕುಗಳ ಬಗ್ಗೆ ಇತ್ತೀಚೆಗೆ ಬಂದ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡುತ್ತಿರುವುದಾಗಿ ಇಲ್ಲಿನ ಸ್ವಿಟ್ಜರ್ಲೆಂಡ್ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

 ಸಿಬಿಐ ನಿರ್ದೇಶಕರ ಹೆಸರು ಎಲ್ಲಿಯೂ ಪ್ರಸ್ತಾಪವಾಗದ ಈ ಹೇಳಿಕೆಯಲ್ಲಿ, ಸ್ವಿಟ್ಜರ್ಲೆಂಡ್ ತೆರಿಗೆದಾರರ ಆಶ್ರಯ ತಾಣ ಅಲ್ಲ. ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟ ಹಣದ ಬಗ್ಗೆ ಅನೇಕ ಊಹಾಪೋಹಗಳು ಇವೆ ಎಂದೂ ತಿಳಿಸಲಾಗಿದೆ.

ವಿದೇಶಗಳಲ್ಲಿ ಭಾರತೀಯರ ಸುಮಾರು 500 ಶತಕೋಟಿ ಡಾಲರ್ ಹಣ ಇದೆ ಎಂದು ಕೆಲವು ದಿನಗಳ ಹಿಂದೆ ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಹೇಳಿದ್ದರು.

ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹಾಗೂ ತೆರಿಗೆ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸ್ವಿಸ್ ಸರ್ಕಾರವು ಎಲ್ಲ ವಿದೇಶಿ ಸರ್ಕಾರಗಳೊಂದಿಗೆ ಸಹಕರಿಸುತ್ತಿದೆ. ಭಾರತ ಹಾಗೂ ಸ್ವಿಟ್ಜರ್ಲೆಂಡ್ ನಡುವಿನ ದ್ವಿ ತೆರಿಗೆ ರದ್ದತಿ  (ಡಿಟಿಎಎ) ಒಪ್ಪಂದವು ಇಂಥ ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಡಳಿತಾತ್ಮಕ ನೆರವು ಕೋರಲು ಕಾನೂನು ಚೌಕಟ್ಟು ಒದಗಿಸುತ್ತದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

2010ರ ಆಗಸ್ಟ್‌ನಲ್ಲಿ ಪರಿಷ್ಕೃತಗೊಂಡ ಡಿಟಿಎಎ, 2011ರ ಅಕ್ಟೋಬರ್ 7 ರಂದು ಜಾರಿಗೆ ಬಂದಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳುವುದು ಹಾಗೂ ತೆರಿಗೆ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ಇದು ಅವಕಾಶ ಮಾಡಿಕೊಡುತ್ತದೆ.
 

ಸಮಿತಿಯ ವರದಿ
ಸ್ವಿಸ್ ಬ್ಯಾಂಕ್ ಠೇವಣಿ ಕುರಿತು ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಅವರು ನೀಡಿರುವ ಹೇಳಿಕೆಯು, ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿರುವ ತಜ್ಞರ ಸಮಿತಿಯ ವರದಿಯನ್ನು ಆಧರಿಸಿದ್ದಾಗಿದೆ ಎಂದು ಸರ್ಕಾರ ಗುರುವಾರ ಹೇಳಿದೆ.

`ನಾನು ಸಿಂಗ್ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇನೆ. ತಜ್ಞರ ವರದಿಯನ್ನು ಆಧರಿಸಿ ಈ ಹೇಳಿಕೆ ನೀಡಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ~ ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ತಿಳಿಸಿದರು.
ಕ್ಷಮಾದಾನ ಅನುಮಾನ
ಕಪ್ಪು ಹಣವನ್ನು ಬಯಲು ಮಾಡುವ ಅಥವಾ ವಿದೇಶಗಳಲ್ಲಿ ಇರುವ ಅಕ್ರಮ ಹಣವನ್ನು ಮರಳಿ ತರುವ ವಿಷಯದಲ್ಲಿ ಸರ್ಕಾರವು ಸಾಮೂಹಿಕ ಕ್ಷಮಾದಾನ ಯೋಜನೆ ಜಾರಿಗೆ ತರುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.

ಇಂಥ ಯೋಜನೆಗಳು ನೈತಿಕ ಪ್ರಶ್ನೆಗಳನ್ನು ಎತ್ತುತ್ತವೆ. ಅಲ್ಲದೇ ಕಾನೂನು ಭಂಜಕರಿಗೆ ಅನುಕೂಲ ಮಾಡಿಕೊಡುತ್ತವೆ. ಆದ ಕಾರಣ ಹಣಕಾಸು ಸಚಿವಾಲಯವು ಇಂಥ ಯಾವುದೇ ಯೋಜನೆಯನ್ನೂ ಪರಿಗಣಿಸುತ್ತಿಲ್ಲ ಎಂದು ಮೂಲಗಳು ಹೇಳಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.