ನವದೆಹಲಿ (ಪಿಟಿಐ): ಕರ್ನಾಟಕದ ಮಾಜಿ ರಾಜ್ಯಪಾಲರೂ, ಭಾರತೀಯ ನಾಗರಿಕ ಸೇವೆ (ಐಸಿಎಸ್) ನಿವೃತ್ತ ಅಧಿಕಾರಿ ಗೋವಿಂದ ನಾರಾಯಣ ಅವರು ಇಲ್ಲಿನ ಛತ್ರಾಪುರ್ ಪ್ರದೇಶದ ತಮ್ಮ ನಿವಾಸದಲ್ಲಿ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
95 ವರ್ಷ ವಯಸ್ಸಿನ ಗೋವಿಂದ ನಾರಾಯಣ ಅವರು, ವೃದ್ಧಾಪ್ಯದ ಕಾರಣ ಕೊನೆಯುಸಿರೆಳೆದಿದ್ದು, ಅಂತ್ಯ ಕಾಲದಲ್ಲಿ ಆಸ್ಪತ್ರೆಗೆ ಸೇರಲು ಸಹ ನಿರಾಕರಿಸಿದ್ದರು ಎಂದು ಅವರ ಕುಟುಂಬದ ಮೂಲಗಳು ಹೇಳಿವೆ.
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಗೋವಿಂದ ನಾರಾಯಣ ಅವರು 1977ರಿಂದ 1983ರ ವರೆಗೆ ಕರ್ನಾಟಕದ ರಾಜ್ಯಪಾಲರಾಗಿದ್ದರು.
ನಾರಾಯಣ ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಅವರ ಅಳಿಯ ಯೋಗೇಶ್ ಚಂದ್ರ ಸಂಪುಟ ಕಾರ್ಯದರ್ಶಿ ದರ್ಜೆ ಹುದ್ದೆಯಲ್ಲಿದ್ದು, ನಿವೃತ್ತರಾಗಿದ್ದಾರೆ. ಮೊಮ್ಮಗ ವಿಕ್ರಂ ಚಂದ್ರ ಪತ್ರಕರ್ತರಾಗಿದ್ದು, ದೃಶ್ಯ ಮಾಧ್ಯಮದಲ್ಲಿ ಉದ್ಯೋಗಿಯಾಗಿದ್ದಾರೆ.
ನಾರಾಯಣ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಇಲ್ಲಿನ ಲೋಧಿ ರುದ್ರಭೂಮಿಯಲ್ಲಿ ಬುಧವಾರ ನಡೆಸಲಾಯಿತು. ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.
ವ್ಯಾಸಂಗ- ಉದ್ಯೋಗ: ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ 1916ರ ಮೇ 5ರಂದು ಗೋವಿಂದ ನಾರಾಯಣ ಅವರ ಜನನ- ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಉನ್ನತ ವ್ಯಾಸಂಗ.
1939ರಲ್ಲಿ ಐಸಿಎಸ್ ಪರೀಕ್ಷೆ ತೇರ್ಗಡೆ. ದೇಶ ಸ್ವಾತಂತ್ರಗೊಂಡ ಆರಂಭದ ವರ್ಷಗಳಲ್ಲಿ (1948-51) ಉತ್ತರ ಪ್ರದೇಶದ ಗೃಹ ಕಾರ್ಯದರ್ಶಿ. ಪಂಡಿತ್ ಜವಹರ ಲಾಲ್ ನೆಹರೂ ಆಡಳಿತಾವಧಿಯಲ್ಲಿ (1951- 54) ನೇಪಾಳದ ರಾಜರಿಗೆ ಸಲಹೆಗಾರರಾಗಿ ನೇಮಕ. 1954-58ರಲ್ಲಿ ಉತ್ತರ ಪ್ರದೇಶದ ಅಭಿವೃದ್ಧಿ ಆಯುಕ್ತ, ನಂತರದಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ.
1961-66ರ ಅವಧಿಯಲ್ಲಿ ಭಾರತೀಯ ವಾಣಿಜ್ಯ ನಿಗಮ, ಖನಿಜ ಮತ್ತು ಲೋಹ ನಿಗಮದ ಅಧ್ಯಕ್ಷ/ವ್ಯವಸ್ಥಾಪಕ ನಿರ್ದೇಶಕ. ಈ ಮಧ್ಯೆ 1964ರಲ್ಲಿ ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರದ ಸಂಪರ್ಕಾಧಿಕಾರಿಯಾಗಿ ಸೇವೆ. ಬಳಿಕ ರಕ್ಷಣಾ ಇಲಾಖೆ ಕೆಲವು ದಿವಸ ಕಾರ್ಯ ನಿವರ್ಹಣೆ.
ತದನಂತರ ಕೇರಳ ರಾಜ್ಯಪಾಲರಿಗೆ ಸಲಹೆಗಾರರಾಗಿ ನೇಮಕ. ಆರೋಗ್ಯ ಮತ್ತು ಕುಟಂಬ ಯೋಜನೆ ಸಚಿವಾಲಯದಲ್ಲೂ ಸಮರ್ಥ ಕಾರ್ಯನಿರ್ವಹಣೆ. 1968ರಲ್ಲಿ ರಷ್ಯಾ ಸಹಯೋಗದಲ್ಲಿ ಸ್ಥಾಪನೆಯಾದ ರಕ್ಷಣಾ ಉತ್ಪಾದನಾ ಘಟಕ ಆರಂಭಕ್ಕೆ ಕಾರಣಕರ್ತರು ಎಂಬ ಹಿರಿಮೆ.
ಬಾಂಗ್ಲಾ ವಿಮೋಚನೆ ಸಮಯದಲ್ಲಿ (1971) ಗೃಹ ಕಾರ್ಯದರ್ಶಿ. ಬಾಂಗ್ಲಾ ಯುದ್ಧವನ್ನು ಸಮರ್ಥವಾಗಿ ನಿರ್ವಹಿಸುವಲ್ಲಿ ಮುಖ್ಯ ಪಾತ್ರಧಾರಿ. 1973ರಲ್ಲಿ ರಕ್ಷಣಾ ಇಲಾಖೆ ಕಾರ್ಯದರ್ಶಿ. ಎರಡು ವರ್ಷಗಳ ತರುವಾಯ ನಿವೃತ್ತಿ. ಸರ್ಕಾರಿ ಸೇವೆಯಿಂದ ಬಿಡುಗಡೆಯಾದ ಮೇಲೆ ಸಾರ್ವಜನಿಕ ಸೇವೆ ಹಾಗೂ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ಒಡನಾಟ.
ಸಿಎಂ ಸಂತಾಪ
ಬೆಂಗಳೂರು: ಕರ್ನಾಟಕದ ಮಾಜಿ ರಾಜ್ಯಪಾಲ ಗೋವಿಂದನಾರಾಯಣ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.