ADVERTISEMENT

ಕರ್ನಾಟಕ, ಗೋವಾ ಅರಣ್ಯ ಕ್ಷೇತ್ರ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST

ಭೋಪಾಲ್ (ಪಿಟಿಐ): ಕರ್ನಾಟಕ, ಬಿಹಾರ, ಗೋವಾ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ ಹಾಗೂ ಅಂಡಮಾನ್ ನಿಕೊಬಾರ್‌ಗಳಲ್ಲಿ ಅರಣ್ಯ ಕ್ಷೇತ್ರ (ಹಸಿರು ವಲಯ) ವಿಸ್ತರಣೆಯಾಗಿದೆ ಎಂದು 2011ರ ಭಾರತದ ಅರಣ್ಯ ವರದಿ ತಿಳಿಸಿದೆ.

ಆದರೆ ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ, ಕೇರಳ, ಗುಜರಾತ್, ಮಹಾರಾಷ್ಟ್ರ ಸೇರಿದಂತೆ ದೇಶದ 14 ರಾಜ್ಯಗಳಲ್ಲಿ ಒಟ್ಟು 367 ಚದರ ಕಿ.ಮೀ. ಅರಣ್ಯ ಕ್ಷೇತ್ರ ಕಡಿಮೆಯಾಗಿದೆ. ಆದರೆ ಮಧ್ಯಪ್ರದೇಶ, ದೆಹಲಿ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಮಾತ್ರ ಅರಣ್ಯ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಅತಿ ಹೆಚ್ಚು ಅರಣ್ಯ ಕ್ಷೇತ್ರ (77,700 ಚದರ ಕಿಲೊಮೀಟರ್) ಹೊಂದಿರುವ ರಾಜ್ಯ ಮಧ್ಯಪ್ರದೇಶವಾಗಿದೆ. ನಂತರದ ಸ್ಥಾನ 67,410 ಚದರ ಕಿ.ಮೀ. ಹಸಿರು ಪ್ರದೇಶದ ರಾಜ್ಯವಾಗಿ ಅರುಣಾಚಲ ಪ್ರದೇಶ ಗುರುತಿಸಿಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಅರಣ್ಯೀಕರಣಕ್ಕೆ ಮತ್ತಷ್ಟು ಉತ್ತೇಜನ ನೀಡಲು ರಾಜ್ಯದ ಅರಣ್ಯ ಸಚಿವ ಸರ್ತಾಜ್ ಸಿಂಗ್ ನಗರೀಕರಣ ಭಾಗದಲ್ಲಿ ಅತ್ಯಧಿಕ ಗಿಡಗಳನ್ನು ನೆಡಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ರಾಜ್ಯದಲ್ಲಿ ದಟ್ಟ ಅರಣ್ಯ ಕ್ಷೇತ್ರ ಬೆಳೆಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದೀಗ ಕಾಡುಹಂದಿಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆಯಾದರೂ ಇದಕ್ಕೆಲ್ಲ ಸ್ಥಳೀಯ ವನ್ಯ ಪ್ರಾಣಿಗಳ ಸಂರಕ್ಷಣೆ ಅಧಿಕಾರಿಗಳ ಒಪ್ಪಿಗೆ ಪಡೆಯಬೇಕಾಗುತ್ತದೆ. ಪ್ರಾಣಿಗಳ ಮಾಂಸವನ್ನು ಸೇವಿಸದೆ ಅದನ್ನು ಸೀಮೆ ಎಣ್ಣೆ ಸುರುವಿ ಹೂಳಬೇಕು ಎಂಬ ನಿರ್ದೇಶನ ನೀಡಲಾಗಿದೆ.

ಈ ನಡುವೆ ಅರಣ್ಯ, ಪರಿಸರ ಹಾಗೂ ಪ್ರವಾಸೋದ್ಯಮ ಕುರಿತಾದ ವಿಷಯ ಪರಿವೀಕ್ಷಕರ ವರದಿಯೊಂದನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಅರಣ್ಯ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಕಳೆದ ಹಲವು ವರ್ಷಗಳ ಅವಧಿಯಲ್ಲಿ ಭಾರಿ ಪ್ರಮಾಣದ ಜೀವವೈವಿಧ್ಯ ನಾಶವಾಗಿದೆ ಎಂದು ಕಳವಳ ವ್ಯಕ್ತಪಡಿಸಲಾಗಿದೆ.

ಕೇರಳದ ಕರಾವಳಿಯಲ್ಲಿ ಇರುವ ಕಾಂಡ್ಲಾವನ ನಾಶವಾಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿರುವ ವರದಿ ಇಂತಹ ಕೃತ್ಯ ನಡೆಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡುವುದರ ಜತೆಯಲ್ಲಿ ನೀರು, ಆಹಾರಕ್ಕಾಗಿ ಕಾಡಿನೊಳಗಿನ ಪ್ರಾಣಿಗಳು ನಾಡಿಗೆ ನುಗ್ಗುವುದನ್ನು ತಡೆಯಲು ಅರಣ್ಯದೊಳಗಡೆ ಸಾಕಷ್ಟು ನೀರಿನ ಮೂಲಗಳನ್ನು ಸಂರಕ್ಷಿಸಬೇಕು ಎಂಬ ಸಲಹೆಯನ್ನು ವರದಿ ಮುಂದಿಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.