ADVERTISEMENT

ಕಳಂಕಿತ ಅಧಿಕಾರಿಗಳ ವಿರುದ್ಧ ತನಿಖೆ: ಒಪ್ಪಿಗೆ ವಿಳಂಬಕ್ಕೆ ಸಿವಿಸಿ ಕಿಡಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಭಾರತೀಯ ನಾಗರಿಕ ಸೇವಾ ಅಧಿಕಾರಿಗಳ ಮೇಲಿನ ಭ್ರಷ್ಟಚಾರ ಆರೋಪದ ತನಿಖೆಗೆ ಒಪ್ಪಿಗೆ ನೀಡಲು ಅನಗತ್ಯ ವಿಳಂಬ ಆಗುತ್ತಿರುವುದಕ್ಕೆ ಸಿವಿಸಿ ಅಸಮಾಧಾನ ವ್ಯಕ್ತಪಡಿಸಿದೆ. 

ಕಳಂಕಿತ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಲು ಒಪ್ಪಿಗೆ ಕೋರಿ ಸಲ್ಲಿಸಿರುವ ಮನವಿಗಳನ್ನು ಕೂಡಲೇ ಪರಿಶೀಲಿಸಿ ನಿಗದಿತ ಅವಧಿಯಲ್ಲಿ ಒಪ್ಪಿಗೆ ನೀಡುವಂತೆ ಸಿವಿಸಿ ವಿವಿಧ ಇಲಾಖೆಗಳನ್ನು ಕೋರಿದೆ.

ತನಿಖೆಗೆ ಅನುಮತಿ ಕೋರಿ ಸಿವಿಸಿ ಸಲ್ಲಿಸಿದ ಬಹತೇಕ ಮನವಿಗಳ ಜತೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ ಇಲಾಖೆಗಳು ನಿರ್ಧಾರ ಕೈಗೊಳ್ಳಲು ಸಮಯ ತೆಗೆದುಕೊಳ್ಳುತ್ತವೆ ಎನ್ನಲಾಗಿದೆ. ಸೂಕ್ತ ದಾಖಲೆಗಳ ಕೊರತೆ ಕುರಿತು ಈಗಾಗಲೇ ಅನೇಕ ಇಲಾಖೆಗಳು ಎತ್ತಿರುವ ಆಕ್ಷೇಪಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸುಪ್ರೀಂಕೋರ್ಟ್ ಆದೇಶದಂತೆ 4 ತಿಂಗಳ ಒಳಗಾಗಿ ಅಧಿಕಾರಿಗಳ ವಿರುದ್ಧದ ತನಿಖೆಗೆ ಇಲಾಖೆಗಳು ಅನುಮತಿ ನೀಡುವುದನ್ನು ಈ ನಿರ್ದೇಶನ ಒಳಗೊಂಡಿದೆ. ತೀರಾ ಇತ್ತೀಚಿನ ಅಂಕಿ, ಅಂಶಗಳ ಪ್ರಕಾರ 45 ಅಧಿಕಾರಿಗಳನ್ನು ಒಳಗೊಂಡ 29 ಪ್ರಕರಣಗಳು 4 ತಿಂಗಳಿನಿಂದ ವಿವಿಧ ಇಲಾಖೆಗಳಲ್ಲಿ ಒಪ್ಪಿಗೆಗಾಗಿ ಕಾಯುತ್ತಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.