ADVERTISEMENT

ಕಳ್ಳಬಟ್ಟಿ ದುರಂತ: ಕೌಟುಂಬಿಕ ದ್ವೇಷ ಕಾರಣ?

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ಹೈದರಾಬಾದ್: ಕೃಷ್ಣಾ ಜಿಲ್ಲೆಯ ಮೈಲಾವರಂನ ಮೂರು ತಾಂಡಾಗಳಲ್ಲಿ ಹೊಸ ವರ್ಷದ ಹಿಂದಿನ ದಿನ ಕಳ್ಳಬಟ್ಟಿ ಸೇವಿಸಿ 19 ಜನ ಸತ್ತು, 24 ಮಂದಿ ಆಸ್ಪತ್ರೆಗೆ ದಾಖಲಾಗಿರುವ ದುರಂತದ ಹಿಂದೆ ಕೌಟುಂಬಿಕ ದ್ವೇಷ ಇರಬಹುದು ಎಂದು ಆಂಧ್ರ ಪ್ರದೇಶ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಜಮುಲಯ್ಯ ಎಂಬ ಮದ್ಯದ ವ್ಯಾಪಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿ `ತಾಂಡಾದ ಕೆಲ ಗುಂಪಿನ ಜನರನ್ನು ಗಮನದಲ್ಲಿಟ್ಟುಕೊಂಡು ಉದ್ದೇಶಪೂರ್ವಕವಾಗಿಯೇ ಮದ್ಯಕ್ಕೆ ವಿಷಪೂರಿತ ಅಂಶ `ಮಿಥೈಲ್~ ಅನ್ನು ಬೆರೆಸಲಾಯಿತು~ ಎಂದು ಹೇಳಿದ್ದಾನೆ.

 ಕಳೆದ 31ರಂದು ಪೊರಟಾ ನಗರದ ತಾಂಡಾದಲ್ಲಿರುವ ಕಳ್ಳಬಟ್ಟಿಯನ್ನು ವಶಪಡಿಸಿಕೊಳ್ಳಲು ತೆರಳಿದ್ದ ಅಬಕಾರಿ ಸಿಬ್ಬಂದಿಯನ್ನು ಅಲ್ಲಿನ ಮಹಿಳೆಯರ ಗುಂಪು ಬೆನ್ನಟ್ಟಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಳ್ಳಬಟ್ಟಿ ಕೇಂದ್ರಗಳು ಇವೆ.

ದುರಂತವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಘಟನೆಯ ವರದಿಗಾಗಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸಲು ನಿರ್ಧರಿಸಿದೆ. ದುರಂತಕ್ಕೆ ಸಂಬಂಧಿಸಿದಂತೆ ಅಕ್ರಮ ಮದ್ಯ ಪತ್ತೆ ಮಾಡುವಲ್ಲಿ ವಿಫಲರಾದ ಅಬಕಾರಿ ಇಲಾಖೆಯ ಸಬ್ ಇನ್ಸ್‌ಪೆಕ್ಟರ್ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.