ADVERTISEMENT

ಕಸ್ತೂರಿರಂಗನ್‌ ವರದಿ ತಿರಸ್ಕರಿಸಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ಕಸ್ತೂರಿರಂಗನ್‌ ವರದಿ ತಿರಸ್ಕರಿಸಿ
ಕಸ್ತೂರಿರಂಗನ್‌ ವರದಿ ತಿರಸ್ಕರಿಸಿ   

ಬೆಂಗಳೂರು: ರಾಜ್ಯದ ಪಶ್ಚಿಮಘಟ್ಟದ ತಪ್ಪಲಿನ 20,668 ಚದರ ಕಿ.ಮೀ. ಪ್ರದೇಶವನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸುವಂತೆ ಡಾ. ಕಸ್ತೂರಿ ರಂಗನ್‌ ಸಮಿತಿ ಮಾಡಿರುವ ಶಿಫಾರಸನ್ನು ತಿರಸ್ಕರಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರದ ವಿವಿಧ ಪ್ರದೇಶಗಳನ್ನು ‘ಪರಿಸರ ಸೂಕ್ಷ್ಮ ವಲಯ’ ಎಂದು ಘೋಷಿಸುವ ಕರಡು ಅಧಿಸೂಚನೆಯನ್ನು  2017 ಫೆಬ್ರುವರಿ 27ರಂದು  ಕೇಂದ್ರ ಸರ್ಕಾರ ಹೊರಡಿಸಿತ್ತು.  ಇದಕ್ಕೆ ಆಕ್ಷೇಪಣೆ ಸಲ್ಲಿಸಲು ರಾಜ್ಯಗಳಿಗೆ ಅವಕಾಶ ಕಲ್ಪಿಸಿತ್ತು.
ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ‘ರಾಜ್ಯ ಸರ್ಕಾರ ಇದಕ್ಕೆ ಆಕ್ಷೇಪಣೆ ಸಲ್ಲಿಸುವ ಬದಲು, ಜನರ ಜೀವನೋಪಾಯಕ್ಕೆ ತೊಂದರೆ ನೀಡಲಿರುವ ಕಸ್ತೂರಿ ರಂಗನ್‌ ವರದಿಯನ್ನೇ  ತಿರಸ್ಕರಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಲಾಯಿತು’ ಎಂದು ವಿವರಿಸಿದರು.

‘ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡಲಿರುವ ಎಲ್ಲ ಗ್ರಾಮ ಪಂಚಾಯಿತಿಗಳು ವರದಿಯನ್ನು ತಿರಸ್ಕರಿಸುವಂತೆ ಸರ್ವಸಮ್ಮತ ನಿರ್ಣಯ ಕೈಗೊಂಡಿದ್ದವು. ಈ ಭಾಗದ ಶಾಸಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಜನಮತದ ಆಧಾರದ ಮೇಲೆ ವರದಿ ತಿರಸ್ಕರಿಸುವಂತೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು’ ಎಂದು ತಿಳಿಸಿದರು.

ADVERTISEMENT

‘ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಒಳಪಡಲಿರುವ ಅರಣ್ಯ ಪ್ರದೇಶದ ಸಂರಕ್ಷಣೆಗಾಗಿ ಈಗಾಗಲೇ ಅಭಯಾರಣ್ಯ, ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನ, ವನ್ಯಧಾಮಗಳನ್ನು ಘೋಷಿಸಲಾಗಿದೆ. ರಾಜ್ಯ ಅರಣ್ಯ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿದೆ ಎಂದು ವಿವರಿಸಲು ನಿರ್ಧರಿಸಲಾಯಿತು’ ಎಂದರು.
‘ಜನವಸತಿ ಮತ್ತು ಜನರ ಜೀವನೋಪಾಯಕ್ಕೆ ಬಳಕೆಯಾಗುತ್ತಿರುವ ಪ್ರದೇಶವನ್ನು ಸೂಕ್ಷ್ಮ ವಲಯದಿಂದ ಹೊರಗಿಡಬೇಕು. ಶೇ 20ಕ್ಕಿಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಗ್ರಾಮಗಳನ್ನು ಸೂಕ್ಷ್ಮ ವಲಯವಾಗಿ ಘೋಷಿಸಬಹುದು’ ಎಂದು ಹಿಂದೆ ಎರಡು ಬಾರಿ ಆಕ್ಷೇಪಣೆ ಸಲ್ಲಿಸಲಾಗಿತ್ತು. ಅದನ್ನು ಕೇಂದ್ರ ಸರ್ಕಾರ ಪರಿಗಣಿಸಿಯೂ ಇಲ್ಲ, ತಿರಸ್ಕರಿಸಿಯೂ ಇಲ್ಲ’ ಎಂದು ವಿವರಿಸಿದರು.

ನೇಮಕ: ತಜ್ಞ ವೈದ್ಯರು, ಆಯುಷ್‌ ವೈದ್ಯರು ಸೇರಿ ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 12,023 ವಿವಿಧ ಹುದ್ದೆಗಳ ನೇಮಕಾತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ಪ್ರಮುಖ ನಿರ್ಣಯಗಳು:
* ಹೊಸದಾಗಿ ಸ್ಥಾಪನೆಯಾಗಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯಕ್ಕೆ ಶಿಡ್ಲಘಟ್ಟ ತಾಲ್ಲೂಕಿನ ಜಂಗಮನಕೋಟೆ ಬಳಿ ಇರುವ ಅಮರಾವತಿ ಗ್ರಾಮದಲ್ಲಿ 57 ಎಕರೆ ಭೂಮಿ.
* ಗುಂಡ್ಲುಪೇಟೆಯಲ್ಲಿ ಕೃಷಿ ಉತ್ಪನ್ನ ಮಾರಾಟ ಸಮಿತಿಯ ಪ್ರಾಂಗಣ ನಿರ್ಮಾಣಕ್ಕೆ 10 ಎಕರೆ ಭೂಮಿ.
* ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ತೋಟಗಾರಿಕೆ ಮಹಾವಿದ್ಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿಗೆ  ₹27.31 ಕೋಟಿ ನೀಡಲು ಒಪ್ಪಿಗೆ.
* ನಾಗಮಂಗಲ ತಾಲ್ಲೂಕಿನ ಚುಂಚನಗಿರಿಯ 128 ಗ್ರಾಮಗಳಿಗೆ ₹164 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಅನುಮೋದನೆ.
* ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಕುಡಚಿ ವಿಧಾನಸಭಾ ಕ್ಷೇತ್ರದ 10 ಗ್ರಾಮಗಳಲ್ಲಿರುವ  19 ಕೆರೆಗಳನ್ನು ಕೃಷ್ಣಾ ನದಿ ನೀರು ಹರಿಯಿಸಿ ತುಂಬಿಸುವ ₹34.38 ಕೋಟಿ ಮೊತ್ತದ ಯೋಜನೆಗೆ ಒಪ್ಪಿಗೆ.
* ಕಲಬುರ್ಗಿ ವಿಮಾನ ನಿಲ್ದಾಣದ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ₹29.20 ಕೋಟಿ ನೀಡಲು ಸಮ್ಮತಿ.

ಅಂಕಿಅಂಶ

10 -ಪರಿಸರ ಸೂಕ್ಷ್ಮ ವಲಯದ ಜಿಲ್ಲೆಗಳು

33- ಪರಿಸರ ಸೂಕ್ಷ್ಮ ವಲಯದ ತಾಲ್ಲೂಕುಗಳು

1,576- ಪರಿಸರ ಸೂಕ್ಷ್ಮ ವಲಯದ ಗ್ರಾಮಗಳು

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ

ಹುದ್ದೆ ಖಾಲಿ
ತಜ್ಞ ವೈದ್ಯರು 1,285
ವೈದ್ಯಾಧಿಕಾರಿಗಳು 684
ಅರೆ ವೈದ್ಯಕೀಯ ಸಿಬ್ಬಂದಿ 8,131
ಶುಶ್ರೂಷಕರು 1,753
ಆಯುಷ್‌ ವೈದ್ಯರು 170

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.