ADVERTISEMENT

ಕಹಿ ಮರೆಯುವಂತೆ ಮನವಿ?

ಅಡ್ವಾಣಿ ಭೇಟಿಯಾದ ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 19:50 IST
Last Updated 18 ಜೂನ್ 2013, 19:50 IST

ನವದೆಹಲಿ (ಪಿಟಿಐ):  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಬಗ್ಗೆ ಮುನಿಸಿಕೊಂಡಿರುವ ಬಿಜೆಪಿ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಮಂಗಳವಾರ ಭೇಟಿ ಮಾಡಿದರು. ಕಳೆದ ವಾರದ ಬೆಳವಣಿಗೆಯಿಂದ ಉಂಟಾಗಿರುವ ಕಹಿಯನ್ನು ಮರೆಯುವಂತೆ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೋದಿ ಅವರಿಗೆ ಪಕ್ಷದ ಚುನಾವಣಾ ಪ್ರಚಾರ ಸಮಿತಿ ನೇತೃತ್ವ ನೀಡಿದ್ದಕ್ಕೆ ಅಸಮಾಧಾನಗೊಂಡಿದ್ದ ಅಡ್ವಾಣಿ ಪಕ್ಷದ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ನಂತರ ಆರ್‌ಎಸ್‌ಎಸ್ ಮುಖ್ಯಸ್ಥರ ಸಂಧಾನದಿಂದ ತಮ್ಮ ನಿಲುವನ್ನು ಬದಲಿಸಿದರು.

ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಮೋದಿ ಅವರು ನವದೆಹಲಿಗೆ ಆಗಮಿಸಿದರು. ಅಡ್ವಾಣಿ ಅವರ ನಿವಾಸಕ್ಕೆ ತೆರಳಿದ ಅವರು, 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

`ಈ ಭೇಟಿ ಉತ್ತಮ ಬೆಳೆವಣಿಗೆ' ಎಂದು ಅಡ್ವಾಣಿ ಹೇಳಿದ್ದಾರೆಂದು ಅವರ ಆಪ್ತ ಮೂಲಗಳು ತಿಳಿಸಿವೆ.ಪಕ್ಷದ ಆಂತರಿಕ ಮತ್ತು ಎನ್‌ಡಿಎ ಮೈತ್ರಿ ಕೂಟದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಇಬ್ಬರು ಮುಖಂಡರು ಚರ್ಚಿಸಿದ್ದಾರೆಂದು ಮೂಲಗಳು ಹೇಳಿವೆ.

`ತಮ್ಮ ಬಗ್ಗೆ ಮುನಿಸಿಕೊಂಡಿದ್ದ ಅಡ್ವಾಣಿ ಅವರನ್ನು ಸಮಾಧಾನ ಪಡಿಸುವ ಸಲುವಾಗಿಯೇ ಅವರನ್ನು ಮೋದಿ ಭೇಟಿ ಮಾಡಿದ್ದರೆ' ಎಂಬ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ವಕ್ತಾರ ಸುಧಾನ್ಷು ತ್ರಿವೇದಿ, `ಅವರಿಬ್ಬರ ಮಧ್ಯೆ ಯಾವುದೇ ಅಸಮಾಧಾನ ಇಲ್ಲ. ಆಕ್ಷೇಪವೂ ಇಲ್ಲ. ಅಡ್ವಾಣಿ ಅವರು ಪಕ್ಷದ ಹಿರಿಯ ನಾಯಕ ಅವರನ್ನು ಪಕ್ಷದ ಮುಖಂಡರು ಭೇಟಿಯಾಗುವುದು ಸರ್ವೇಸಾಮಾನ್ಯ' ಎಂದರು.

`ಮೋದಿ ಅವರನ್ನು ಚುನಾವಣಾ ಪ್ರಚಾರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದಕ್ಕೂ ಮುನ್ನ ಈ ಕುರಿತು ಪಕ್ಷದಲ್ಲಿ ವಿವರವಾಗಿ ಚರ್ಚಿಸಲಾಯಿತು. ನಂತರವಷ್ಟೆ ಗೋವಾದಲ್ಲಿ ನಡೆದ ಪಕ್ಷದ ಕಾರ್ಯಕಾರಿಣಿಯಲ್ಲಿ ಈ ಘೋಷಣೆ ಮಾಡಲಾಯಿತು' ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ರಾಜಕೀಯ ಸಲಹೆಗಾರರೂ ಆಗಿರುವ ತ್ರಿವೇದಿ ಹೇಳಿದರು.

ಪ್ರಚಾರ ಸಮಿತಿ ಮೊದಲ ಸಭೆ: ಚುನಾವಣಾ ಪ್ರಚಾರ ಸಮಿತಿಯ ಸದಸ್ಯರೂ ಆಗಿರುವ ಪಕ್ಷದ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಮಿತಿ ಅಧ್ಯಕ್ಷರಾದ ಮೋದಿ ಸಭೆ ನಡೆಸಿದರು. ಮುಂದಿನ ಏಪ್ರಿಲ್- ಮೇ ಒಳಗೆ ನಡೆಯಲಿರುವ ಲೋಕಸಭಾ ಚುನಾವಣೆ ಮತ್ತು ಆರು ರಾಜ್ಯಗಳ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸಿದರು ಎಂದು ಮೂಲಗಳು ಹೇಳಿವೆ.

ಅಟಲ್, ಜೋಷಿ ಭೇಟಿ: ಮಾಜಿ ಪ್ರಧಾನಿ ಮತ್ತು ಪಕ್ಷದ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರ ನಿವಾಸಕ್ಕೂ ಭೇಟಿ ನೀಡಿದ್ದರು.
ಇದಕ್ಕೂ ಮೊದಲ ಪಕ್ಷದ ಹಿರಿಯ ಮುಖಂಡ ಮುರಳಿ ಮನೋಹರ ಜೋಷಿ ಅವರನ್ನು ಮೋದಿ ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೋಷಿ, `ಚುನಾವಣಾ ಪ್ರಚಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕೆ ಅವರು ಕೃತಜ್ಞತೆ ಹೇಳಲು ಬಂದಿದ್ದರು' ಎಂದರು.

ಅಯೋಧ್ಯೆ ಭೇಟಿ ರದ್ದು
ಅಹಮದಾಬಾದ್ ವರದಿ:
ನರೇಂದ್ರ ಮೋದಿ ಅವರು ಅಯೋಧ್ಯೆ ಭೇಟಿಯನ್ನು ರದ್ದು ಮಾಡಿದ್ದಾರೆ ಎಂದು ಗುಜರಾತ್ ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ. ಜೆಡಿಯು ಮೈತ್ರಿ ಮುರಿದಿರುವ ಹಿನ್ನೆಲೆಯಲ್ಲಿ ಮತ್ತೊಂದು ವಿವಾದಕ್ಕೆ ಆಸ್ಪದ ನೀಡಬಾರದು ಎಂಬ ಕಾರಣಕ್ಕಾಗಿ ಅವರು ಅಯೋಧ್ಯೆ ಭೇಟಿಯನ್ನು ರದ್ದು ಮಾಡಿದ್ದಾರೆ ಎನ್ನಲಾಗಿದೆ.

ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅವರ 75ನೇ ಹುಟ್ಟುಹಬ್ಬ  ಕಾರ್ಯಕ್ರಮದಲ್ಲಿ ಭಾಗವಹಿಸಲು ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡಬೇಕಿತ್ತು.

ಯೋಜನಾ ವೆಚ್ಚಕ್ಕೆ ಒಪ್ಪಿಗೆ: ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ಸಿಂಗ್ ಅಹ್ಲುವಾಲಿಯಾ ಅವರನ್ನು ಭೇಟಿ ಮಾಡಿದ  ಮೋದಿ, ಪ್ರಸಕ್ತ ಸಾಲಿಗೆ ರೂ  59,000 ಕೋಟಿ ಮೊತ್ತದ ಯೋಜನಾ ವೆಚ್ಚಕ್ಕೆ ಒಪ್ಪಿಗೆ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT