ADVERTISEMENT

ಕಾಂಗ್ರೆಸ್‌ಗೆ ಮುಳುವಾದ ಬೆಲೆ ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ನವದೆಹಲಿ: ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಪೂರೈಕೆಯನ್ನು ಒಂಬತ್ತಕ್ಕೆ ಮಿತಿಗೊಳಿಸಿದ್ದು, ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯು ಮತದಾರರು ಕಾಂಗ್ರೆಸ್‌ ವಿರುದ್ಧ ತಿರುಗಿಬೀಳಲು ಪ್ರಮುಖ ಕಾರಣ­ವಾದವು ಎಂದು ಪಕ್ಷದ ಬಹುತೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿ­ಸಿದ್ದಾರೆ.

ಲೋಕಸಭಾ ಚುನಾವಣೆಗೆ ಮುಂಚಿನ ‘ಉಪಾಂತ್ಯ’ (ಸೆಮಿಫೈನಲ್‌) ಎಂದೇ ಹೇಳಲಾದ ಐದು ರಾಜ್ಯ­ಗಳ ವಿಧಾನಸಭೆ ಚುನಾವಣೆಯಲ್ಲಿ ಮಿಜೋರಾಂ ಹೊರತು­ಪಡಿಸಿ ಉಳಿದೆಡೆ ಕಾಂಗ್ರೆಸ್‌ ದಯನೀಯ ಸೋಲು ಕಂಡಿರುವ ಬಗ್ಗೆ ಗಂಭೀರ ಪರಾಮರ್ಶೆ ನಡೆಸಿರುವ ಪಕ್ಷದ ವರಿಷ್ಠರು ಹೀಗೆ ಅಭಿಪ್ರಾಯಪಟ್ಟಿದ್ದಾರೆ.

ವರಮಾನ ವೃದ್ಧಿಸಲು ಡೀಸೆಲ್‌ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರ್ಕಾರ ಕೈಗೊಂಡ ಹಲವು ಕ್ರಮಗಳನ್ನು ಕೆಲ ಮುಖಂಡರು ಪ್ರಶ್ನಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಉತ್ತಮ ಸಾಧನೆ ತೋರಬೇಕಾದರೆ ಸರ್ಕಾರ ಇಂತಹ ಅಪ್ರಿಯ ನಿರ್ಧಾರಗಳನ್ನು ವಾಪಸ್‌ ಪಡೆಯಬೇಕು ಎಂದೂ ಅವರು ಒತ್ತಾಯಿಸಿ­ದ್ದಾರೆ.

ಅಭ್ಯರ್ಥಿಗಳ ಆಯ್ಕೆ ಅದರಲ್ಲೂ ದೆಹಲಿಯಲ್ಲಿ 40 ಹಾಲಿ ಶಾಸಕರನ್ನೇ ಕಣಕ್ಕೆ ಇಳಿಸಿದ್ದು ಪಕ್ಷಕ್ಕೆ ಮುಳುವಾಯಿತು ಎಂದು ಕೆಲವರು ದೂರಿದ್ದಾರೆ. ಸೋಲಿನ ನೈತಿಕ ಹೊಣೆ ಹೊತ್ತು ಈಗಾಗಲೇ ಹಲವು ಕಾಂಗ್ರೆಸ್‌ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಅಯ್ಯರ್‌ ಹೇಳಿಕೆ ತಂದಿತ್ತ ಗೊಂದಲ: ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಮಹಾಕದನಕ್ಕೆ ಮೊದಲೇ ಪಕ್ಷ ದಯನೀಯ ಸೋಲು ಕಂಡಿದ್ದು ಪ್ರತಿಪಕ್ಷ ಸ್ಥಾನದಲ್ಲಿ ಕೂರಲು ಸಿದ್ಧವಾಗಬೇಕು ಎಂದು ಗಾಂಧಿ ಕುಟುಂಬದ ನಿಷ್ಠ, ಹಿರಿಯ ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಪತ್ರಿಕೆಯೊಂದಕ್ಕೆ ನೀಡಿರುವ ಹೇಳಿಕೆ  ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿದೆ.

ಅಯ್ಯರ್‌ ಅವರ ಈ ಹೇಳಿಕೆ ಬಗ್ಗೆ ಅಂತರ ಕಾಯ್ದುಕೊಂಡಿರುವ ಪಕ್ಷ, ಇದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದೆ. ಲೋಕಸಭಾ ಚುನಾವಣೆಯಲ್ಲಿ ರಾಹುಲ್‌ ಪಕ್ಷ ಮುನ್ನಡೆಸುವ ಸಾಮರ್ಥ್ಯಕ್ಕೆ ಸಂಬಂಧಿ­ಸಿದಂತೆ ಉದ್ಭವಿಸುವ ಪ್ರಶ್ನೆಗ­ಳಿಂದ ರಕ್ಷಿ­ಸಲು ಅಯ್ಯರ್‌ ಮತ್ತು ದಿಗ್ವಿಜಯ್‌ ಸಿಂಗ್‌ ಅವರು ಶತ ಪ್ರಯತ್ನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.