ADVERTISEMENT

ಕಾಂಗ್ರೆಸ್‌ಗೆ ಲಾಲು ಗಡುವು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 14:10 IST
Last Updated 1 ಮಾರ್ಚ್ 2014, 14:10 IST

ಪಟ್ನಾ (ಪಿಟಿಐ): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 11  ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಶನಿವಾರ ಹೇಳಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು  ಭಾನುವಾರ ನಡೆಯುವ ಪಕ್ಷದ ಸಂಸದೀಯ ಮಂಡಳಿ ಸಭೆಗೂ ಮುನ್ನ ತನ್ನ ಅಭಿಪ್ರಾಯ ತಿಳಿಸುವಂತೆ ಕಾಂಗ್ರೆಸ್‌ಗೆ ಗಡುವು ನೀಡುವ ಮೂಲಕ ಒತ್ತಡ ಹಾಕಿದ್ದಾರೆ.

ಇದೇ ವೇಳೆ ಲಾಲು ಅವರು 40 ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಕಾಂಗ್ರೆಸ್ ಮೈತ್ರಿಕೂಟದ ಮಿತ್ರಪಕ್ಷವಾದ ಎನ್‌ಸಿಪಿಗೆ ಬಿಟ್ಟುಕೊಡುವುದಾಗಿ ಹೇಳಿದರು.

ಯುಪಿಎ ಮೈತ್ರಿಕೂಟ ತೊರೆದು ಎಲ್‌ಜೆಪಿಯು ಬಿಜೆಪಿ ಮೈತ್ರಿಕೂಟದತ್ತ ಒಲುವು ತೋರಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಲಾಲು ಅವರು ಕಾಂಗ್ರೆಸ್‌ಗೆ ಈ ಪಂಥಾಹ್ವಾನ ನೀಡಿ, ಒತ್ತಡದ ತಂತ್ರಕ್ಕೆ ಮೊರೆಹೋಗಿದ್ದಾರೆ.

ದೆಹಲಿಯಿಂದ ಕಳೆದ ರಾತ್ರಿ ರಾಜ್ಯಕ್ಕೆ ಹಿಂತಿರುಗಿದ ಲಾಲು ಅವರು ತಮ್ಮ ಅಭಿಪ್ರಾಯವನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಬಿಹಾರ ಉಸ್ತುವಾರಿ ವಹಿಸಿಕೊಂಡಿರುವ ಸಿ.ಪಿ.ಜೋಶಿ ಅವರಿಗೆ ತಿಳಿಸಿರುವುದಾಗಿ ಹೇಳಿದರು.

`ಪಟ್ನಾದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಯುವ ಪಕ್ಷದ ಸಂಸದೀಯ ಮಂಡಳಿ ಸಭೆಗೂ ಮುನ್ನ ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ತಿಳಿಸುವಂತೆ ಅವರಿಗೆ ನಾನು ಹೇಳಿದ್ದೇನೆ' ಎಂದು ಲಾಲು ಅವರು ಸುದ್ಧಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.