ADVERTISEMENT

ಕಾಂಗ್ರೆಸ್‌ ಹಿತಾಸಕ್ತಿಗೆ ನೆರವಾಗುವುದೇ ತೃತೀಯರಂಗದ ಗುರಿ:ಮೋದಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 11:47 IST
Last Updated 3 ಮಾರ್ಚ್ 2014, 11:47 IST

ಮುಜಫ್ಪರಪುರ (ಪಿಟಿಐ): ಕಾಂಗ್ರೆಸ್‌ ಹಿತಾಸಕ್ತಿಗಳಿಗೆ ನೆರವಾಗುವುದೇ ತೃತೀಯ ರಂಗದ ಗುರಿಯಾಗಿದ್ದು, ದೇಶಕ್ಕೆ ಯಾವುದೇ ಒಳ್ಳೆಯ ಕೆಲಸ ಮಾಡಲು ಸಾಧ್ಯವಿಲ್ಲ’ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಇಲ್ಲಿ ನಡೆದ ಪಕ್ಷದ ಪ್ರಚಾರ ಸಭೆಯೊಂದರಲ್ಲಿ  ಮಾತನಾಡಿದ ಅವರು ‘ಕಾಂಗ್ರೆಸ್‌ ಹಿತಾಸಕ್ತಿಗಳಿಗೆ ಸಹಾಯ ಮಾಡುವುದೇ ತೃತೀಯ ರಂಗದ ನೈಜ ಗುರಿ’ ಎಂದು ಜರಿದರು.

ಬಿಹಾರ ಮುಖ್ಯಮಂತ್ರಿ ನಿತಿಶ್‌ ಕುಮಾರ್‌ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ, ‘ಒಂದು ವರ್ಷದ ಅಥವಾ ಆರು ತಿಂಗಳ ಹಿಂದೆ ನೀವು ತೃತೀಯ ರಂಗದ ಬಗ್ಗೆ ಕೇಳಿದ್ದಿರಾ? ಚುನಾವಣೆಯ ಅಂಗವಾಗಿ ಇದು ರಚನೆಯಾಗಿದೆ. ಇದು ಚುನಾವಣೆಗಳನ್ನು ಹಾಳುಗೆಡವಬಹುದಷ್ಟೆ. ದೇಶಕ್ಕೆ ಏನು ಒಳ್ಳೆಯದು ಮಾಡದು’ ಎಂದು ಮೋದಿ ವ್ಯಂಗ್ಯವಾಡಿದರು.

ADVERTISEMENT

ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳ ವಿರುದ್ಧವೂ ಹರಿಹಾಯ್ದ ಮೋದಿ, ‘ಎಲ್ಲಾ ಜಾತಿಗಳು ಹಾಗೂ ಪಂಗಡಗಳ ಹಿತಾಸಕ್ತಿಗೆ ನೆರವಾಗುವುದು ಬಿಜೆಪಿಯ  ಜಾತ್ಯತೀತದ ಅರ್ಥ. ಆದರೆ ಬೇರೆ ಪಕ್ಷಗಳಲ್ಲಿ ಇದಕ್ಕೆ ‘ಮೋದಿ ಅಧಿಕಾರಕ್ಕೆ ಬರುವುದನ್ನು ತಡೆಯುವುದು ಎಂಬ ಸಂಕೀರ್ಣ ಅರ್ಥವಿದೆ’ ಎಂದು ಅಭಿಪ್ರಾಯ ಪಟ್ಟರು.

ನಿತಿಶ್‌ ಕುಮಾರ್‌ ಅವರ ಅಭಿವೃದ್ಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಮೋದಿ ‘ರಾಜ್ಯದಲ್ಲಿ ಕೇವಲ 23ರಷ್ಟು ನಿವಾಸಗಳು ಶೌಚಾಲಯ ಹೊಂದಿದ್ದು, ಕೇವಲ ಶೇಕಡಾ 16ರಷ್ಟು ವಿದ್ಯುತ್‌ ಸಂಪರ್ಕ ಹೊಂದಿವೆ’ ಎಂದು ಜರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.