ADVERTISEMENT

ಕಾಂಗ್ರೆಸ್ ಜಾಹೀರಾತಿಗೆ ಆಯೋಗ ನಕಾರ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2012, 19:30 IST
Last Updated 5 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಅಲ್ಪಸಂಖ್ಯಾತರಿಗೆ ಮೀಸಲಾತಿ ಉಪ-ಕೋಟಾ ಕಲ್ಪಿಸುವ ಕುರಿತ ಕಾಂಗ್ರೆಸ್ ಜಾಹೀರಾತನ್ನು ಚುನಾವಣಾ ಆಯೋಗದ ಉತ್ತರ ಪ್ರದೇಶ ಮಾಧ್ಯಮ ಪ್ರಮಾಣೀಕರಣ ಮತ್ತು ನಿಯಂತ್ರಣ ಸಮಿತಿ ತಿರಸ್ಕರಿದ್ದು, ಇದರಿಂದ ಚುನಾವಣೆಗೆ ಸಜ್ಜಾಗಿರುವ ಸದರಿ ರಾಜ್ಯದಲ್ಲಿ ಮುಸ್ಲಿಮರನ್ನು ಓಲೈಸುವ ಪಕ್ಷದ ಪ್ರಯತ್ನಕ್ಕೆ ಮತ್ತೊಮ್ಮೆ ಹಿನ್ನಡೆಯಾದಂತಾಗಿದೆ.

    ಮೂಲಗಳ ಪ್ರಕಾರ, ಪಕ್ಷವು ಅಲ್ಪಸಂಖ್ಯಾತರ ಮೀಸಲಾತಿ ಉಪ-ಕೋಟಾ ಮತ್ತು ವಿಶೇಷವಾಗಿ ಉತ್ತರಪ್ರದೇಶಕ್ಕೆ ವಿನ್ಯಾಸಗೊಳಿಸಿದ ಎಂಎನ್‌ಆರ್‌ಇಜಿಎ ಮೇಲೆ ತಯಾರಿಸಿದ ಪ್ರಚಾರ ಜಾಹೀರಾತಿಗೆ ಒಪ್ಪಿಗೆ ನೀಡುವಂತೆ ಚುನಾವಣಾ ಆಯೋಗವನ್ನು ಕೋರಿತ್ತು. ಆದರೆ ಈ ಮನವಿಯನ್ನು ಇಂತಹ ವಿಷಯಗಳಲ್ಲಿ ನಿರ್ಧಾರ  ಕೈಗೊಳ್ಳುವ ಅಧಿಕಾರ ಹೊಂದಿರುವ ಆಯೋಗದ ಮಾಧ್ಯಮ ಪ್ರಮಾಣೀಕರಣ ಮತ್ತು ನಿಯಂತ್ರಣ ಸಮಿತಿ ಪರಿಶೀಲನೆಗೆ ವಹಿಸಲಾಗಿತ್ತು. 

 ಕಾಂಗ್ರೆಸ್ ಜಾಹೀರಾತನ್ನು ಪರಿಶೀಲಿಸಿದ ಸಮಿತಿ ಎಂಎನ್‌ಆರ್‌ಇಜಿಎ ಪ್ರಚಾರಕ್ಕೆ ಒಪ್ಪಿ, ಅಲ್ಪಸಂಖ್ಯಾತರ ಮೀಸಲಾತಿ ಉಪ- ಕೋಟಾ ಪ್ರಚಾರಕ್ಕೆ ಅನುಮತಿ ನಿರಾಕರಿಸಿದೆ. ಈ ತೀರ್ಮಾನವನ್ನು ಖಚಿತಪಡಿಸಿರುವ ಉತ್ತರಪ್ರದೇಶ ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು, ಎಂಎನ್‌ಆರ್‌ಇಜಿಎ ಪ್ರಚಾರ ಜಾಹೀರಾತಿಗೆ ಮಾತ್ರ ಸಮಿತಿ ಒಪ್ಪಿಗೆ ನೀಡಿರುವುದಾಗಿ ತಿಳಿಸಿದ್ದಾರೆ.

ಪಕ್ಷವು ಉತ್ತರಪ್ರದೇಶದಲ್ಲಿ ಎಂಎನ್‌ಆರ್‌ಇಜಿಎ ಮತ್ತು ಅಲ್ಪಸಂಖ್ಯಾತರ ಮೀಸಲಾತಿ ಉಪ-ಕೋಟಾದ ಬಗ್ಗೆ ಪ್ರತ್ಯೇಕ ಆಡಿಯೊ ಜಾಹೀರಾತು ಮತ್ತು ಇನ್ನೊಂದು ಅಲ್ಪಸಂಖ್ಯಾತರಿಗೆ ಮೀಸಲಾತಿ ಉಪ-ಕೋಟಾ ನೀಡುವುದನ್ನು ವೈಭವೀಕರಿಸಿದ ವಿಡಿಯೊ ಜಾಹೀರಾತನ್ನು ಆಯೋಗಕ್ಕೆ ಸಲ್ಲಿಸಿತ್ತು.

ಆದರೆ ಅಲ್ಪಸಂಖ್ಯಾತರ ಮೀಸಲಾತಿ ಉಪ-ಕೋಟಾ ಜಾಹೀರಾತಿಗೆ ಆಯೋಗದ ಮಾಧ್ಯಮ ಸಮಿತಿ ಒಪ್ಪಿಗೆ ನೀಡದ ಕಾರಣ ಪಕ್ಷ ಈಗ ಅಲ್ಪಸಂಖ್ಯಾತರ ಮೀಸಲಾತಿ ಉಪ-ಕೋಟಾದ ಕುರಿತು ಬದಲಾವಣೆಯೊಂದಿಗೆ ಹೊಸ ಜಾಹೀರಾತನ್ನು ಹೊರತಂದು ಫೆ.8ರಿಂದ ಆರಂಭವಾಗಲಿರುವ ಏಳು ಹಂತದ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಬಳಸಲು ಯೋಜಿಸಿದೆ.

   ಈ ಹಿಂದೆ, ಚುನಾವಣಾ ಆಯೋಗವು ಐದು ರಾಜ್ಯಗಳ ಚುನಾವಣೆ ಮುಗಿಯುವರೆಗೆ ಮುಸ್ಲಿಮರಿಗೆ ಮೀಸಲಾತಿ ಉಪ-ಕೋಟಾ ಸೌಲಭ್ಯ ನೀಡುವುದನ್ನು ತಡೆಹಿಡಿಯುವಂತೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸೂಚಿಸಿತ್ತು. ಇದರೊಂದಿಗೆ, ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷೀದ್ ಇತ್ತೀಚೆಗೆ ಫರೀದಾಬಾದ್‌ನಲ್ಲಿ ತಮ್ಮ ಪತ್ನಿಯ ಪರ ಚುನಾವಣಾ ಪ್ರಚಾರ ನಡೆಸುವಾಗ ಅಲ್ಪಸಂಖ್ಯಾತರಿಗೆ ಮೀಸಲಾತಿ ಉಪ-ಕೋಟಾವನ್ನು ದ್ವಿಗುಣ ಮಾಡುವುದಾಗಿ ಆಶ್ವಾಸನೆ ನೀಡಿ ವಿವಾದಕ್ಕೆ ಸಿಲುಕಿದ್ದರು. ಈಗಾಗಲೇ ಕಾಂಗ್ರೆಸ್ ಮತ್ತು ಅದರ ಪ್ರಮುಖ ಪ್ರಚಾರಕರು ಅಲ್ಪಸಂಖ್ಯಾತರಿಗೆ ಮೀಸಲಾತಿ ಉಪ-ಕೋಟಾ ಕಲ್ಪಿಸುವ ಭರವಸೆಯಿಂದ ಪಕ್ಷಕ್ಕೆ ಲಾಭವಾಗುವ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.