ADVERTISEMENT

ಕಾಂಗ್ರೆಸ್ ಮಾನ್ಯತೆ ಕೋರ್ಟ್‌ಗೆ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2012, 19:30 IST
Last Updated 7 ನವೆಂಬರ್ 2012, 19:30 IST

ನವದೆಹಲಿ (ಪಿಟಿಐ): ಪತ್ರಿಕಾ ಸಂಸ್ಥೆಯೊಂದಕ್ಕೆ 90 ಕೋಟಿ ರೂಪಾಯಿ ಸಾಲ ನೀಡಿರುವ ಕಾಂಗ್ರೆಸ್ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಲು ಕೋರಿ ತಾವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮನವಿಯನ್ನು ವಜಾಗೊಳಿಸಿರುವುದನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಜನತಾ ಪಕ್ಷದ ನಾಯಕ ಸುಬ್ರಮಣ್ಯನ್ ಸ್ವಾಮಿ ತಿಳಿಸಿದ್ದಾರೆ.

`ನ್ಯಾಷನಲ್ ಹೆರಾಲ್ಡ್~ ವೃತ್ತಪತ್ರಿಕೆ ನಡೆಸುತ್ತಿರುವ ಅಸೋಸಿಯೇಟ್ಸ್ ಜರ್ನಲ್ಸ್ ಸಂಸ್ಥೆಗೆ ಕಾಂಗ್ರೆಸ್ ರೂ. 90 ಕೋಟಿ ಸಾಲ ನೀಡಿರುವುದು ರಾಜಕೀಯ ಪಕ್ಷಗಳ ನೋಂದಣಿ ಕಾಯ್ದೆ ಉಲ್ಲಂಘನೆಯಾಗಿರುವುದರಿಂದ ಪಕ್ಷದ ಮಾನ್ಯತೆಯನ್ನು ರದ್ದುಗೊಳಿಸಲು ಕೋರಿ ಸ್ವಾಮಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.

ಚುನಾವಣಾ ಆಯೋಗದ ಈ ನಿರ್ಧಾರ ಜನರಲ್ಲಿ ಅದರ ಬಗ್ಗೆ ಇರುವ ವಿಶ್ವಾಸಾರ್ಹತೆ ಕುಂದಿಸುವಂತೆ ಮಾಡಿದೆ. ಆದಾಗ್ಯೂ ತಾವು ಈ ವಿಷಯವನ್ನು ಕೋರ್ಟ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳುವೆ. ಆಯೋಗ ಇಬ್ಬಗೆಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಸ್ವಾಮಿ, ಪತ್ರಿಕೆಯೊಂದರಲ್ಲಿ ತಾವು ಬರೆದ  ಲೇಖನಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ನೋಂದಣಿ ರದ್ದುಗೊಳಿಸುವ ಹುನ್ನಾರವೂ ಆಯೋಗದಲ್ಲಿ ನಡೆಯುತ್ತಿದೆ ಎಂದು ದೂರಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.