ADVERTISEMENT

ಕಾಂಬ್ಳಿ ದಂಪತಿ ವಿರುದ್ಧ ಪ್ರಕರಣ

ಮನೆಕೆಲಸದಾಕೆ ಕೂಡಿಹಾಕಿದ ಆರೋಪ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2015, 19:30 IST
Last Updated 30 ಆಗಸ್ಟ್ 2015, 19:30 IST

ಮುಂಬೈ (ಪಿಟಿಐ): ಮನೆಕೆಲಸದಾಕೆ ನೀಡಿದ ದೂರಿನಂತೆ ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ವಿನೋದ್‌ ಕಾಂಬ್ಳಿ ಹಾಗೂ ಪತ್ನಿಯ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ. ವೇತನ ಕೇಳಿದ್ದಕ್ಕೆ ಅನುಚಿತವಾಗಿ ವರ್ತಿಸಿ ಕೊಠಡಿಯೊಂದರಲ್ಲಿ ಕೂಡಿ ಹಾಕಿದ್ದಾರೆ ಎಂದು ಕೆಲಸದಾಕೆ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಕಾಂಬ್ಳಿ ದಂಪತಿ ವಿರುದ್ಧ ದೂರು ನೀಡಿದ್ದಳು.

ಈ ಸಂಬಂಧ ಬಾಂದ್ರಾ ಪೊಲೀಸರು 43 ವರ್ಷದ ಕಾಂಬ್ಳಿ ಹಾಗೂ ಪತ್ನಿ ಆಂಡ್ರಿಯಾ ವಿರುದ್ಧ ಶನಿವಾರ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ‘ಸೋನಿ ಸರ್ಸಾಲ್‌ (30) ಎಂಬಾಕೆ ಕಾಂಬ್ಳಿ ಹಾಗೂ ಪತ್ನಿ ವಿರುದ್ಧ ಶನಿವಾರ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾಳೆ. ತನಗೆ ಸೇರಬೇಕಿರುವ ಸಂಬಳ ಕೇಳಿದಾಗ ಕೊಡಲು ಒಪ್ಪಲಿಲ್ಲ.

ಮಾತ್ರವಲ್ಲ, ಕೊಠಡಿಯೊಂದರಲ್ಲಿ ಮೂರು ದಿನಗಳ ಕಾಲ ಕೂಡಿಹಾಕಿ ಹಲ್ಲೆ ನಡೆಸಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ’ ಎಂದು ಮುಂಬೈ ಪೊಲೀಸ್‌ ವಕ್ತಾರ ಧನಂಜಯ್‌ ಕುಲಕರ್ಣಿ ತಿಳಿಸಿದ್ದಾರೆ. ಕಾಂಬ್ಳಿ ವಿರುದ್ಧ ಭಾರತೀಯ ದಂಡ ಸಂಹಿತೆಯ 343, 504, 506 ಮತ್ತು 43 ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ.

ಸುಳ್ಳು ಆರೋಪ: ಮನೆಕೆಲಸದಾಕೆ ಮಾಡಿರುವ ಆರೋಪವನ್ನು ಕಾಂಬ್ಳಿ ಅಲ್ಲಗಳೆದಿದ್ದಾರೆ.  ‘ನಾನು ಅಂತಹ ಯಾವುದೇ ತಪ್ಪು ಮಾಡಿಲ್ಲ. ಈ ಎಲ್ಲಾ ಆರೋಪಗಳು ಸುಳ್ಳು. ಯಾರ ಮೇಲೂ ಹಲ್ಲೆ ಮಾಡಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ಮನೆಯಲ್ಲಿರುವ ಎಲ್ಲ ಕೆಲಸ ದಾಳುಗಳಿಗೆ ಸರಿಯಾಗಿ ಸಂಬಳ ನೀಡುತ್ತಿ ದ್ದೇನೆ. ಆಕೆಗೂ ನೀಡಿದ್ದೇನೆ.

ಆಕೆಯನ್ನು ಕೊಠಡಿಯೊಳಗೆ ಏಕೆ ಕೂಡಿ ಹಾಕಬೇಕು. ಮನೆಯಲ್ಲಿ ಸಿಸಿಟಿವಿ ಇದ್ದು, ತನಿಖಾಧಿ ಕಾರಿಗಳು ಪರಿಶೀಲಿಸಲಿ’ ಎಂದಿದ್ದಾರೆ. ‘ದೂರು ನೀಡಿರುವ ಕೆಲಸದಾಕೆ ಮಾದಕವ್ಯಸನಿ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಮನೆ ಬಿಟ್ಟು ಹೋಗುವಂತೆ ಆಕೆಗೆ ಸೂಚಿಸಿದ್ದೆ’ ಎಂದೂ ಕಾಂಬ್ಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.