ADVERTISEMENT

ಕಾನೂನು ಸಚಿವರ ಹೇಳಿಕೆಗೆ ಸುಪ್ರೀಂಕೋರ್ಟ್ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಅವರು `ಉದ್ಯಮಿಗಳನ್ನು ಜೈಲಿಗೆ ಕಳುಹಿಸುವುದರಿಂದ ದೇಶದಲ್ಲಿ ಬಂಡವಾಳ ಹೂಡಿಕೆಗೆ ಅಡ್ಡಿಯುಂಟಾಗುತ್ತದೆ~ ಎಂದು ಹೇಳಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಹೇಳಿಕೆ ನೀಡಿರುವುದು ನಿಜವೇ ಆಗಿದ್ದಲ್ಲಿ `ಗೊಂದಲಕಾರಿ~ ಹೇಳಿಕೆಯಾಗುತ್ತದೆ ಎಂದು ತಿಳಿಸಿದೆ.
 
ಕಾನೂನು ಸಚಿವರ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ನ್ಯಾಯಮೂರ್ತಿ ಜಿ.ಎಸ್.ಸಿಂಘ್ವಿ ಮತ್ತು     ಎಚ್.ಎಲ್.ದತ್ತು ಅವರನ್ನು ಒಳಗೊಂಡ ನ್ಯಾಯಪೀಠ, ಅಡಿಷನಲ್ ಸಾಲಿಸಿಟರ್ ಜನರಲ್ ಹರೇನ್ ರಾವಲ್ ಅವರಿಗೆ ಸೂಚಿಸಿದೆ.

2ಜಿ ತರಂಗಾಂತರ ಹಂಚಿಕೆ ಹಗರಣದ ಆಪಾದಿತರಾದ ಯುನಿಟೆಕ್ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಚಂದ್ರ ಮತ್ತು ಸ್ವಾನ್ ಟೆಲಿಕಾಂ ನಿರ್ದೇಶಕ ವಿನೋದ್ ಗೋಯಂಕ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಮೇಲಿನಂತೆ ಪ್ರತಿಕ್ರಿಯಿಸಿದರು.

ಪ್ರಮುಖ ಪತ್ರಿಕೆಗಳಲ್ಲಿ ಕಾನೂನು ಸಚಿವರ ಹೇಳಿಕೆ ಪ್ರಕಟವಾಗಿದ್ದು, ನಾವು ಉದ್ಯಮಿಗಳನ್ನು ಜೈಲಿನಲ್ಲಿ ಇಡಲು ಆಸಕ್ತಿ ತೋರಿಸುತ್ತಿದ್ದೇವೆ ಎಂಬ ಅರ್ಥ ಬರುತ್ತದೆ ಎಂದು ಹೇಳಿದರು.

ಈ ಹಂತದಲ್ಲಿ ಮಾತನಾಡಿದ ಗೋಯಂಕ ಪರ ವಕೀಲ ಮುಕುಲ್ ರೋಹಟಗಿ, ಸಚಿವರ ಹೇಳಿಕೆ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ನಿಜ ಎಂದು ತಿಳಿಸಿದರು.


ಸಚಿವರ ಹೇಳಿಕೆಯನ್ನು ಬೆಂಬಲಿಸುವಿರಾ ಎಂದು ರಾವಲ್ ಅವರನ್ನು ನ್ಯಾಯಪೀಠ ಕೇಳಿತು ಮತ್ತು ಕನಿಮೊಳಿ ಅವರ ಜಾಮೀನು ಅರ್ಜಿಯನ್ನು ವಿರೋಧಿಸದಿರಲು ಸಿಬಿಐ ನಿರ್ಧರಿಸಿದೆ ಎಂಬ ವರದಿಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿತು.

ರಾವಲ್ ಅವರು ಈ ವರದಿಯನ್ನು ನಿರಾಕರಿಸಿದರಲ್ಲದೆ, ಕನಿಮೊಳಿ ಅವರ ಜಾಮೀನು ಅರ್ಜಿಯನ್ನು ವಿರೋಧಿಸುವಂತೆ ತಮಗೆ ಸ್ಪಷ್ಟ ಆದೇಶವಿದೆ ಎಂದರು.

ಖುರ್ಷಿದ್ ಸ್ಪಷ್ಟನೆ: ಮಂಗಳವಾರ ರಾತ್ರಿ ತಾವು ನೀಡಿದ ಹೇಳಿಕೆಯನ್ನು ಸರಿಪಡಿಸುವ ಪ್ರಯತ್ನ ಮಾಡಿರುವ ಕಾನೂನು ಸಚಿವ ಸಲ್ಮಾನ್ ಖುರ್ಷಿದ್, `ಯಾರು ಜೈಲಿನಲ್ಲಿ ಇರಬೇಕು ಎಂದು ನಿರ್ಧಾರ ಮಾಡಬೇಕಾದ್ದು ನ್ಯಾಯಾಲಯ~ ಎಂದು ತಿಳಿಸಿದ್ದಾರೆ.

ನ್ಯಾಯಾಂಗವು ರಾಜಕೀಯ, ಆರ್ಥಿಕ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ತಾವು ನೀಡಿರುವ ಹೇಳಿಕೆ ವಿವಾದ ಉಂಟು ಮಾಡಿರುವ ಬಗ್ಗೆ ಸಮಜಾಯಿಷಿ ನೀಡಿರುವ ಸಚಿವರು, ತಮ್ಮ ಹೇಳಿಕೆಗೂ 2ಜಿ ಹಗರಣದ ಪ್ರಕರಣಗಳಿಗೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಬದಲಾಗುತ್ತಿರುವ ಸಮಾಜದಲ್ಲಿ ಪ್ರತಿಯೊಂದು ಸಂಸ್ಥೆಯೂ ಅದಕ್ಕೆ ತಕ್ಕ ರೀತಿಯಲ್ಲಿ ಪ್ರತಿಕ್ರಿಯಿಸಬೇಕಾಗುತ್ತದೆ, ಪರಿಸರ ರಕ್ಷಣೆಯ ವಿಚಾರದಲ್ಲಿ ನ್ಯಾಯಾಂಗ ತಳೆದಿರುವ ನಿಲುವು ಶ್ಲಾಘನೀಯ ಎಂದು ಹೇಳಿದ್ದಾರೆ.

ಮಾವೊವಾದಿಗಳಿಗೆ ಸಹಾನುಭೂತಿ ವ್ಯಕ್ತಪಡಿಸಿದ ವಿನಾಯಕ ಸೆನ್ ಅವರಿಗೆ ಜಾಮೀನು ನೀಡುವಾಗ ಅವರು ತಪ್ಪಿತಸ್ಥರಲ್ಲ ಎಂದೇನೂ ಸುಪ್ರೀಂಕೋರ್ಟ್ ಹೇಳಿಲ್ಲ ಎಂಬುದನ್ನು ಸಚಿವರು ಈ ಸಂದರ್ಭದಲ್ಲಿ ಮಾರ್ಮಿಕವಾಗಿ ಪ್ರಸ್ತಾಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT