ADVERTISEMENT

ಕಾನ್ಪುರ: ರ‍್ಯಾಗಿಂಗ್ ಮಾಡಿದ ಐಐಟಿಯ 22 ಹಿರಿಯ ವಿದ್ಯಾರ್ಥಿಗಳ ಅಮಾನತು

ಏಜೆನ್ಸೀಸ್
Published 10 ಅಕ್ಟೋಬರ್ 2017, 11:21 IST
Last Updated 10 ಅಕ್ಟೋಬರ್ 2017, 11:21 IST
ಕಾನ್ಪುರ:  ರ‍್ಯಾಗಿಂಗ್ ಮಾಡಿದ ಐಐಟಿಯ 22 ಹಿರಿಯ ವಿದ್ಯಾರ್ಥಿಗಳ ಅಮಾನತು
ಕಾನ್ಪುರ: ರ‍್ಯಾಗಿಂಗ್ ಮಾಡಿದ ಐಐಟಿಯ 22 ಹಿರಿಯ ವಿದ್ಯಾರ್ಥಿಗಳ ಅಮಾನತು   

ಕಾನ್ಪುರ:  ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯ 22 ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಮಾನತು ಮಾಡಿದೆ.

16 ಹಿರಿಯ ವಿದ್ಯಾರ್ಥಿಗಳನ್ನು 3 ವರ್ಷಗಳವರೆಗೆ ಮತ್ತು ಆರು ವಿದ್ಯಾರ್ಥಿಗಳನ್ನು ಒಂದು ವರ್ಷದವರೆಗೆ ಅಮಾನತು ಮಾಡಿದ್ದು, ಕಾಲೇಜಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮ ಕೈಗೊಂಡಿದೆ.

ಕಿರಿಯ ವಿದ್ಯಾರ್ಥಿಗಳಿಗೆ ಮೂರನೇ ವರ್ಷದ ಹಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿರುವುದು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ಬಗ್ಗೆ ಸೋಮವಾರ ರಾತ್ರಿ ಸಭೆ ನಡೆಸಿದ ಕಾಲೇಜಿನ ಸೆನೆಟ್ ಈ ನಿರ್ಧಾರ ತೆಗೆದುಕೊಂಡಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯಿಸಿದ ಐಐಟಿಯ ಉಪನಿರ್ದೇಶಕ ಡಾ. ಮಣೀಂದ್ರ ಅಗರ್‌ವಾಲ್ ಅವರು, 16 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಕರುಣೆ ಆಧಾರದ ಮೇಲೆ ಶಿಕ್ಷೆಯಿಂದ ವಿನಾಯಿತಿ ನೀಡಿಲ್ಲ. ಶಿಕ್ಷೆಯ ಅವಧಿ ಮುಗಿದ ಬಳಿಕವೇ ಮತ್ತೆ ಅವರ ಕೋರ್ಸ್‌ಗೆ ಪ್ರವೇಶ ನೀಡಲಾಗುವುದು ಎಂದು ಹೇಳಿದ್ದಾರೆ.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಂದ ಕಿರಿಯ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ, ಅಮಾನವೀಯ ವರ್ತನೆಯಿಂದ ಬೇಸತ್ತ ಸುಮಾರು 30 ಕಿರಿಯ ವಿದ್ಯಾರ್ಥಿಗಳು 50 ಹಿರಿಯ ವಿದ್ಯಾರ್ಥಿಗಳ ಮೇಲೆ ಆಗಸ್ಟ್ 20ರಲ್ಲಿ ಕಾಲೇಜಿನ ಡೀನ್ ಬಳಿ ದೂರು ದಾಖಲಿಸಿದ್ದರು.

ಕಾಲೇಜಿನ ರ‍್ಯಾಗಿಂಗ್ ನಿಗ್ರಹ ಸಮಿತಿಯು ಕೈಗೊಂಡ ವಿಚಾರಣೆ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಶಿಕ್ಷೆಯನ್ನು ನೀಡಲಾಗಿದೆ . ಅಲ್ಲದೇ ಇದೇ ಕಾಲೇಜಿನ ಫ್ರೋಫೆಸರ್‌ಯೊಬ್ಬರು ತಮ್ಮ ಬ್ಲಾಗ್‌ನಲ್ಲಿ ವಿದ್ಯಾರ್ಥಿಗಳ ವರ್ತನೆ ಬಗ್ಗೆ ಬರೆದ ನಂತರವೇ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುವ ನಿರ್ಧಾರವನ್ನು ಮತ್ತಷ್ಟು ಕಠಿಣಗೊಳಿಸಲಾಯಿತು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.