ADVERTISEMENT

ಕಾಮನ್‌ವೆಲ್ತ್ ಹಗರಣ: ಕಲ್ಮಾಡಿ ವಿರುದ್ಧ ದೋಷಾರೋಪ ನಿಗದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 19:59 IST
Last Updated 21 ಡಿಸೆಂಬರ್ 2012, 19:59 IST

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್  ಕ್ರೀಡಾಕೂಟ (ಸಿಡಬ್ಲ್ಯುಜಿ)ದ ಹಗರಣಕ್ಕೆ ಸಂಬಂಧಿಸಿ `ಸಿಡಬ್ಲ್ಯುಜಿ' ಸಂಘಟನಾ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಮತ್ತು ಇತರರ ವಿರುದ್ಧ ಫೋರ್ಜರಿ, ವಂಚನೆ, ಸಂಚು ಮಾಡಿದ ಕಾರಣಕ್ಕಾಗಿ ದೋಷಾರೋಪ ಹೊರಿಸುವಂತೆ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ.

ಕಲ್ಮಾಡಿ, ಒಲಿಪಿಂಕ್ ಸಮಿತಿಯ ಮಾಜಿ ಮಹಾ ಕಾರ್ಯದರ್ಶಿ ಲಲಿತ್ ಭಾನೋಟ್ ಮತ್ತು ಇತರ ಒಂಬತ್ತು ಜನರ ವಿರುದ್ಧ ಸ್ವಿಟ್ಜರ್‌ಲೆಂಡ್‌ನ `ಸ್ವಿಸ್ ಟೈಮಿಂಗ್ ಒಮೆಗಾ' ಕಂಪೆನಿಗೆ ಅಕ್ರಮವಾಗಿ ಗುತ್ತಿಗೆ ನೀಡಿ ಸರ್ಕಾರಿ ಬೊಕ್ಕಸಕ್ಕೆ ಭಾರಿ ನಷ್ಟ ಮಾಡಿದ್ದಕ್ಕಾಗಿ ಆರೋಪ ಸಿದ್ಧ ಪಡಿಸುವಂತೆ ಕೋರ್ಟ್ ಹೇಳಿದೆ. ಎಂಟು ಜನ ಆರೋಪಿಗಳು ಮತ್ತು ಮೂರು ಕಂಪೆನಿಗಳು ವಂಚನೆ, ಫೋರ್ಜರಿ ಹಾಗೂ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಗಾಗಿ ಈ ಎಲ್ಲರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಆರೋಪ ಸಿದ್ಧಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ಉದ್ಯಮಿಗೆ ಜಾಮೀನು

ನವದೆಹಲಿ (ಪಿಟಿಐ): 2009ರಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಮುಂಚೆ ಲಂಡನ್‌ನಲ್ಲಿ ನಡೆದಿದ್ದ `ಕ್ವೀನ್ಸ್ ಬ್ಯಾಟನ್ ರಿಲೆ ಭ್ರಷ್ಟಾಚಾರ ಹಗರಣ'ಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್ ಎದುರು ಶುಕ್ರವಾರ ಹಾಜರಾಗಿದ್ದ ಇಂಗ್ಲೆಂಡ್‌ನ ಉದ್ಯಮಿ ಆಶೀಶ್ ಪಟೇಲ್ ಅವರಿಗೆ ಕೋರ್ಟ್ ಜಾಮೀನು ನೀಡಿದೆ.

ಎ.ಎಂ. ಕಾರ್ ಮತ್ತು ವ್ಯಾನ್ ಹೈರ್ ಲಿಮಿಟೆಡ್ ಹಾಗೂ ಎ.ಎಂ. ಫಿಲ್ಮ್ಸ್ ಕಂಪೆನಿಗಳ ಮಾಲೀಕರಾದ ಆಶೀಶ್ ಪಟೇಲ್ ಅವರಿಗೆ ಸಿಬಿಐ ವಿಶೇಷ ನ್ಯಾಯಾಧೀಶರಾದ ತಲ್ವಂತ್ ಸಿಂಗ್ ಅವರು, ಐದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಠೇವಣಿ ಮತ್ತು ಅಷ್ಟೇ ಮೊತ್ತದ ಭದ್ರತೆ ನೀಡಬೇಕು ಎಂದು ಆದೇಶಿಸಿ ಜಾಮೀನು ಮಂಜೂರು ಮಾಡಿದ್ದಾರೆ.

2009ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೂ ಮುಂಚೆ ಇಂಗ್ಲೆಂಡ್‌ನಲ್ಲಿ ನಡೆದ `ಕ್ವೀನ್ಸ್ ಬ್ಯಾಟನ್ ರಿಲೆ' ಸಂದರ್ಭದಲ್ಲಿ ವಿಡಿಯೊ ಸ್ಕ್ರೀನಿಂಗ್ ಹಾಗೂ ಸಾರಿಗೆ ಮತ್ತು ಸಾಗಣೆ ಗುತ್ತಿಗೆ ಪಡೆದಿದ್ದ ಆಶೀಶ್ ಅವರ ಕಂಪೆನಿಗಳು ಸುಳ್ಳು ದಾಖಲೆ ಸೃಷ್ಟಿಸಿ, ನಿಯಮಗಳನ್ನು ಉಲ್ಲಂಘಿಸುವ ಮೂಲಕ ಭ್ರಷ್ಟಾಚಾರ ಎಸಗಿದ್ದವು ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.