ADVERTISEMENT

‘ಕಾವೇರಿ’ದ ಹೋರಾಟ: ಚೆನ್ನೈನಿಂದ ಪುಣೆಗೆ ಐಪಿಎಲ್‌ ಪಂದ್ಯಗಳ ಸ್ಥಳಾಂತರ

ಏಜೆನ್ಸೀಸ್
Published 12 ಏಪ್ರಿಲ್ 2018, 7:50 IST
Last Updated 12 ಏಪ್ರಿಲ್ 2018, 7:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾವೇರಿ ನದಿನೀರು ನಿರ್ವಹಣಾ ಮಂಡಳಿ ರಚಿಸುವಂತೆ ತಮಿಳುನಾಡಿನಲ್ಲಿ ಹೋರಾಟದ ಕಾವು ದಿನೆ–ದಿನೇ ಹೆಚ್ಚುತ್ತಿದ್ದಂತೆ ಚೆನ್ನೈನಲ್ಲಿ ಆಯೋಜಿಸಲು ಯೋಜಿಸಿದ್ದ ಐಪಿಎಲ್‌ ಪಂದ್ಯಗಳನ್ನು ಪುಣೆಗೆ ಸ್ಥಳಾಂತರ ಮಾಡಲು ಬಿಸಿಸಿಐ ನಿರ್ಧರಿಸಿದೆ.

ಸಿಎಸ್‌ಕೆ ನಾಯಕ ಮಹೇಂದ್ರ ಸಿಂಗ್‌ ದೋನಿ ಕಳೆದ ಎರಡು ಆವೃತ್ತಿಗಳಲ್ಲಿ ಪುಣೆ ತಂಡವನ್ನು ಪ್ರತಿನಿಧಿಸಿದ್ದರು. ಹಾಗಾಗಿ ಅವರಿಗೆ ಅಲ್ಲಿ ಅಭಿಮಾನಿಗಳ ಬಳಗ ಹೆಚ್ಚಿದೆ. ಈ ಕಾರಣಕ್ಕಾಗಿ ಪಂದ್ಯಗಳನ್ನು ಪುಣೆಗೆ ಸ್ಥಳಾಂತರಿಸಲು ಸಿಎಸ್‌ಕೆ ಫ್ರಾಂಚೈಸಿ ಒಪ್ಪಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

‘ಚೆನ್ನೈ ಸೂಪರ್‌ ಕಿಂಗ್ಸ್‌(ಸಿಎಸ್‌ಕೆ) ತನ್ನ ತವರು ನೆಲದಲ್ಲಿ ಆಡಬೇಕಿದ್ದ ಪಂದ್ಯಗಳನ್ನು ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಆ ನಗರಗಳ ಪಟ್ಟಿಯಲ್ಲಿ ವಿಶಾಖಪಟ್ಟಣ, ತಿರುವನಂತಪುರ, ಪುಣೆ ಮತ್ತು ರಾಜ್‌ಕೋಟ್‌ ಸೇರಿವೆ’ ಎಂದು ಬಿಸಿಸಿಐನ ಆಡಳಿತಾಧಿಕಾರಿಗಳ ಸಮಿತಿ (ಸಿಒಎ) ಮುಖ್ಯಸ್ಥ ವಿನೋದ್ ರಾಯ್‌ ಬುಧವಾರ ತಿಳಿಸಿದ್ದರು.

ADVERTISEMENT

‘ಚೆನ್ನೈನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸದಂತೆ’ ಹಲವಾರು ಸಂಘಟನೆಗಳು ಇತ್ತೀಚೆಗೆ ಕರೆ ನೀಡಿದ್ದವು.

ಚೆನ್ನೈ ಸೂಪರ್‌ ಕಿಂಗ್ಸ್(ಸಿಎಸ್‌ಕೆ) ಮತ್ತು ಕೊಲ್ಕತ್ತಾ ನೈಟ್ಸ್‌ ರೈಡರ್ಸ್‌ ನಡುವೆ ಚೆನ್ನೈನಲ್ಲಿ ಮಂಗಳವಾರ ಪಂದ್ಯ ನಡೆಯುತ್ತಿದ್ದಾಗ, ನಗರದಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಒಬ್ಬ ಪ್ರತಿಭಟನಾಕಾರನಂತೂ ಸಿಎಸ್‌ಕೆ ಆಟಗಾರ ರವೀಂದ್ರ ಜಡೇಜಾ ಮೇಲೆ ಪಂದ್ಯದ ವೇಳೆಯೇ ಶೂ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದ.

‘ತಮಿಳುನಾಡಿನಲ್ಲಿನ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿ ಅವಲೋಕಿಸಿ ಆರು ಪಂದ್ಯಗಳನ್ನು ಬೇರೆಡೆ ನಡೆಸುತ್ತಿದ್ದೇವೆ’ ಎಂದು ರಾಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.