ADVERTISEMENT

ಕಾವೇರಿ ವಿವಾದ: ತಮಿಳುನಾಡು ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್...

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ನವದೆಹಲಿ: ~ಕಾವೇರಿ ವಿವಾದ~ದ ಅಂತಿಮ ತೀರ್ಪು ಕುರಿತು ಕೆಲವು ಸ್ಪಷ್ಟೀಕರಣ ಕೇಳಿ ಸಲ್ಲಿಸಿರುವ ಅರ್ಜಿಗಳ ತ್ವರಿತ ವಿಚಾರಣೆಗೆ ನ್ಯಾಯ ಮಂಡಳಿಗೆ ಸೂಚಿಸಬೇಕೆಂಬ ತಮಿಳುನಾಡು ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಈ ಸಂಬಂಧದ ವಿಶೇಷ ಮೇಲ್ಮನವಿ ವಿಚಾರಣೆಯನ್ನು ಫೆಬ್ರುವರಿಯಲ್ಲಿ ಆರಂಭಿಸುವುದಾಗಿ ನ್ಯಾ.ಡಿ.ಕೆ. ಜೈನ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಮಂಗಳವಾರ ತಿಳಿಸಿತು.

ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸೇರಿದಂತೆ ಕಾವೇರಿ ನದಿ ನೀರಿನ ಮೇಲೆ ಹಕ್ಕು ಪಡೆದಿರುವ ರಾಜ್ಯಗಳು `ಅಂತರ ರಾಜ್ಯ ನದಿ ನೀರು ವಿವಾದ ಕಾಯ್ದೆ~ 5 (3) ಅಡಿ ಕೆಲವು ಸ್ಪಷ್ಟೀಕರಣ ಕೇಳಿ ನ್ಯಾಯಮಂಡಳಿ ಮುಂದೆ 2007ರಲ್ಲಿ ಅರ್ಜಿ  ಸಲ್ಲಿಸಿವೆ.

~ಕೃಷ್ಣಾ ನ್ಯಾಯಮಂಡಳಿ~ ತೀರ್ಪು ಪ್ರಶ್ನಿಸಿರುವ ವಿಶೇಷ ಮೇಲ್ಮನವಿ ಸಲ್ಲಿಕೆಯಾಗಿದ್ದರೂ ಸ್ಪಷ್ಟೀಕರಣ ಕೇಳಿರುವ ಅರ್ಜಿಗಳ ವಿಚಾರಣೆ ನಡೆಸಲು ನ್ಯಾಯಮಂಡಳಿಗೆ ಕೋರ್ಟ್ ಅನುಮತಿ ನೀಡಿದೆ ಎಂದು ತಮಿಳುನಾಡು ವಾದಿಸಿತು. ಕಾವೇರಿ ವಿವಾದದ ವಿಷಯದಲ್ಲೂ ಇದೇ ನಿಲುವು ಅನುಸರಿಸಬೇಕು ಎಂಬ ತಮಿಳುನಾಡು ವಾದ ಕುರಿತು ನ್ಯಾಯಾಲಯ ಯಾವುದೇ ಆದೇಶ   ನೀಡಲಿಲ್ಲ.

ಕಾವೇರಿ ನ್ಯಾಯಮಂಡಳಿ 2007ರ ಫೆಬ್ರುವರಿಯಲ್ಲಿ ಅಂತಿಮ ತೀರ್ಪು ನೀಡಿತು. ಈ ತೀರ್ಪನ್ನು ಪ್ರಶ್ನಿಸಿ ಸಂಬಂಧಪಟ್ಟ ರಾಜ್ಯಗಳು ಮೇಲ್ಮನವಿ ಸಲ್ಲಿಸಿವೆ.

ಅಲ್ಲದೆ ಅಂತಿಮ ತೀರ್ಪಿಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟನೆ ಕೇಳಿ ನ್ಯಾಯಮಂಡಳಿ ಮುಂದೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿಶೇಷ ಮೇಲ್ಮನವಿಗಳ ವಿಚಾರಣೆ ಆರಂಭಿಸಬಾರದು ಎಂದು ತಮಿಳುನಾಡು ಮೊದಲಿಗೆ ವಾದಿಸಿತ್ತು.

ಅನಂತರ ಕಳೆದ ವರ್ಷ ಮಧ್ಯಂತರ ಅರ್ಜಿ ಸಲ್ಲಿಸಿ ಸ್ಪಷ್ಟೀಕರಣ ಕೇಳಿರುವ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನ್ಯಾಯಮಂಡಳಿಗೆ ನಿರ್ದೇಶಿಸುವಂತೆ ಮನವಿ ಮಾಡಿತ್ತು.

~ಕರ್ನಾಟಕ ನ್ಯಾಯಮಂಡಳಿ 91ರಲ್ಲಿ ನೀಡಿರುವ ಮಧ್ಯಂತರ ಆದೇಶದ  ಅವಧಿ ಮುಗಿದಿದೆ ಎಂಬ ನಿಲುವು ತಳೆದಿದೆ. ಮತ್ತೊಂದೆಡೆ ಅಂತಿಮ ತೀರ್ಪು ಅಧಿಸೂಚನೆ ಪ್ರಕಟವಾಗಿಲ್ಲ ಎಂದು ಪ್ರತಿಪಾದಿಸುತ್ತಿದೆ. ಆದರೆ, ಅಂತಿಮ ತೀರ್ಪಿನಲ್ಲಿ ಪ್ರಸ್ತಾಪವಾಗದ ಯೋಜನೆಗಳನ್ನು ಕೈಗೆತ್ತಿಕೊಂಡಿದೆ~ ಎಂದು ತಮಿಳುನಾಡು ಅರ್ಜಿಯಲ್ಲಿ ಆರೋಪಿಸಿತ್ತು.

ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ವಿಚಾರಣೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ನ್ಯಾಯಮಂಡಳಿ ಮುಂದಿರುವ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಸೂಚನೆ ನೀಡುವಂತೆ ಮನವಿ ಮಾಡಲು ಈ ಅರ್ಜಿ ಸಲ್ಲಿಸಲಾಗಿದೆ ಎಂದು ತಮಿಳುನಾಡು ವಿವರಿಸಿತ್ತು.

ತಮಿಳುನಾಡಿನ ಒಟ್ಟು ಕೃಷಿಯಲ್ಲಿ ಶೇ.45 ಭಾಗ ಕಾವೇರಿ ಮೇಲೆ ಅವಲಂಬಿತವಾಗಿದೆ. ಕರ್ನಾಟಕ ಸಕಾಲಕ್ಕೆ ನಿಗದಿತ ಪ್ರಮಾಣದ ನೀರು ಬಿಡುಗಡೆ ಮಾಡದಿದ್ದರೆ ರಾಜ್ಯದ ರೈತರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಅಲ್ಲದೆ. ಕೃಷಿ ಆಧಾರಿತವಾಗಿರುವ ರಾಜ್ಯದ ಆರ್ಥಿಕ ವ್ಯವಸ್ಥೆಗೂ ಪೆಟ್ಟು ಬೀಳಲಿದೆ ಎಂದು ತಮಿಳುನಾಡು ಹೇಳಿತ್ತು.

ನ್ಯಾಯಾಲಯ ವಿಶೇಷ ಮೇಲ್ಮನವಿಗಳನ್ನು ಇತ್ಯರ್ಥ ಮಾಡುವವರೆಗೆ ಕರ್ನಾಟಕ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ನಿರ್ಬಂಧಿಸುವಂತೆ ತಮಿಳುನಾಡು ಮನವಿ ಮಾಡಿತ್ತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.