ADVERTISEMENT

ಕಾವೇರಿ ವಿವಾದ: ಫೆ. 7ರಿಂದ ನಿತ್ಯ ವಿಚಾರಣೆ

ನ್ಯಾಯಮಂಡಳಿ ಐತೀರ್ಪು ಪ್ರಶ್ನಿಸಿದ ಅರ್ಜಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2017, 19:30 IST
Last Updated 4 ಜನವರಿ 2017, 19:30 IST
ಕಾವೇರಿ ವಿವಾದ: ಫೆ. 7ರಿಂದ ನಿತ್ಯ ವಿಚಾರಣೆ
ಕಾವೇರಿ ವಿವಾದ: ಫೆ. 7ರಿಂದ ನಿತ್ಯ ವಿಚಾರಣೆ   

ನವದೆಹಲಿ: ಕಾವೇರಿ ಜಲವಿವಾದ ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಕಣಿವೆ ವ್ಯಾಪ್ತಿಯ ರಾಜ್ಯಗಳು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಫೆಬ್ರುವರಿ 7ರಿಂದ ಆರಂಭಿಸಲು ಸುಪ್ರೀಂ ಕೋರ್ಟ್‌ ನಿರ್ಧರಿಸಿತು.

ಬುಧವಾರ ಮಧ್ಯಾಹ್ನ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಮಿತ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು, ತಮಿಳುನಾಡಿಗೆ ನಿತ್ಯವೂ 2,000 ಕ್ಯುಸೆಕ್‌ ನೀರು ಬಿಡುವಂತೆ ಕಳೆದ ಅಕ್ಟೋಬರ್‌ 18ರಂದುನೀಡಿದ್ದ ಆದೇಶವನ್ನು ಮುಂದಿನ ಆದೇಶದವರೆಗೆ ಪಾಲಿಸುವಂತೆ ಕರ್ನಾಟಕಕ್ಕೆ ಸೂಚಿಸಿತು.

‘ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯದೆ, ಕೂಡಲೇ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕು’ ಎಂಬ  ತಮಿಳುನಾಡು ಪರ ವಕೀಲ ಶೇಖರ್‌ ನಾಫಡೆ ಅವರ ಮನವಿಯನ್ನು ಪೀಠವು ತಿರಸ್ಕರಿಸಿತು.

ಮಂಡಳಿ ರಚನೆ ಕುರಿತ ತಮಿಳುನಾಡು ಬೇಡಿಕೆಯನ್ನು ಕರ್ನಾಟಕ ಪರ ಹಿರಿಯ ವಕೀಲ ಫಾಲಿ ನಾರಿಮನ್‌ ವಿರೋಧಿಸಿದರಲ್ಲದೆ, ಐತೀರ್ಪಿನಲ್ಲಿರುವ ಈ ಅಂಶವನ್ನೂ ಕರ್ನಾಟಕ ಪ್ರಶ್ನಿಸಿದೆ ಎಂದು ಹೇಳಿದರು.

ನ್ಯಾಯಮಂಡಳಿಯ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಈ ವಿಷಯವನ್ನೂ ಪರಿಗಣಿಸಿದರಾಯಿತು ಎಂದು ತಿಳಿಸಿದ ನ್ಯಾಯಮೂರ್ತಿ ಮಿಶ್ರಾ, ನೀರು ಹಂಚಿಕೆ ಪ್ರಮಾಣ, ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಿಸಿದಂತೆ 2007ರಲ್ಲಿ ನೀಡಿರುವ ನ್ಯಾಯಮಂಡಳಿಯು ನೀಡಿರುವ ಐತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳು ಮತ್ತಷ್ಟು ಮಾಹಿತಿ ಸಲ್ಲಿಸುವಂತೆ ಸೂಚಿಸಿದರು.

ಮೂರು ರಾಜ್ಯಗಳ ಅರ್ಜಿಗಳ ವಿಚಾರಣೆಯನ್ನು ಫೆ. 7ರಿಂದ ನಿತ್ಯ ಮಧ್ಯಾಹ್ನ 2ರಿಂದ ಕನಿಷ್ಠ ಮೂರು ವಾರಗಳ ಕಾಲ ನಡೆಸಲು ನಿರ್ಧರಿಸಿದ ಪೀಠವು, ನೀರು ಹಂಚಿಕೆ ಕುರಿತು ನ್ಯಾಯಪೀಠ ಆದೇಶಿಸಬಹುದೇ ವಿನಾ ನಿರ್ವಹಣೆ ಕುರಿತು ಸೂಚಿಸಲು ಸಾಧ್ಯವಿಲ್ಲ ಎಂದು ಹೇಳಿತು.

‘ನ್ಯಾಯಮಂಡಳಿ ಅಸ್ತಿತ್ವದಲ್ಲಿದೆಯೇ’ ಎಂದು ಕೇಳಿದ ನ್ಯಾಯಮೂರ್ತಿ ಅಮಿತಾವ್‌ರಾಯ್‌ ಹಾಗೂ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್‌ ಅವರನ್ನು ಒಳಗೊಂಡ ಪೀಠವು, ‘ಕಾವೇರಿ ಕಣಿವೆ ವ್ಯಾಪ್ತಿಯ ರಾಜ್ಯಗಳ ಅರ್ಜಿಗಳನ್ನು ಮತ್ತೆ ನ್ಯಾಯಮಂಡಳಿಯ ಗಮನಕ್ಕೆತರುವ ಉದ್ದೇಶ ಕೋರ್ಟ್‌ಗೆ ಇಲ್ಲ. ಬದಲಿಗೆ, ಸುದೀರ್ಘ ಅವಧಿಯಿಂದ ನನೆಗುದಿಗೆ ಬಿದ್ದಿರುವ ವಿವಾದವನ್ನು ಬಗೆಹರಿಸುವತ್ತ ಆದ್ಯತೆ ನೀಡಲಾಗುವುದು’ ಎಂದು ಸ್ಪಷ್ಟಪಡಿಸಿತು.

ಕರ್ನಾಟಕವು ಪ್ರಸಕ್ತ ಸಾಲಿನಲ್ಲಿ ಒಟ್ಟು 4.8 ಟಿಎಂಸಿ ಅಡಿಯಷ್ಟು ಕಡಿಮೆ ಪ್ರಮಾಣದ ನೀರನ್ನು ಹರಿಸಿದೆ ಎಂಬ ತಮಿಳುನಾಡಿನ ವಾದವನ್ನು ಅಲ್ಲಗಳೆದ ಕರ್ನಾಟಕ ಪರ ವಕೀಲ ಮೋಹನ್‌ ಕಾತರಕಿ, ಮಳೆಯ ಕೊರತೆಯನಡುವೆಯೂ ತಮಿಳುನಾಡಿಗೆ ನೀರು ಹರಿಸಲಾಗಿದೆ. ಜನವರಿ 31ರ ಅಂತ್ಯಕ್ಕೆ ಕರ್ನಾಟಕದಿಂದ ಹರಿಯಬೇಕಿರುವ ಒಟ್ಟು ನೀರಿನ ಪ್ರಮಾಣದಲ್ಲಿ ಒಂದು ಟಿಎಂಸಿ ಅಡಿಯಷ್ಟು ಮಾತ್ರ ಕೊರತೆ ಕಂಡುಬರಲಿದೆ ಎಂಬ ವಿವರ ನೀಡಿದರು.

‘ಈಶಾನ್ಯ ಮಳೆಯ ಮಾರುತಗಳೂ ಈ ಬಾರಿ ತಮಿಳುನಾಡಿಗೆ ನಿರಾಸೆ ಮೂಡಿಸಿದ್ದು, ಶೇ 68ರಷ್ಟು ಕೊರತೆ ಕಂಡುಬಂದಿದೆ’ ಎಂಬ ತಮಿಳುನಾಡಿನ ವಾದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ನಾರಿಮನ್‌, ‘ಅದಕ್ಕೆ ನಾವು ಜವಾಬ್ದಾರರಲ್ಲ. ಕರ್ನಾಟಕವೂ ಕಳೆದ ಎರಡು ವರ್ಷಗಳಿಂದ ಬರಗಾಲ ಎದುರಿಸುತ್ತಿದೆ’ ಎಂದರು.

ನೀರಿನ ಹಂಚಿಕೆ, ನಿರ್ವಹಣೆ ಮತ್ತು ಬಳಕೆಯ ಕುರಿತು ಸ್ಪಷ್ಟ ನಿರ್ದೇಶನ ನೀಡುವತ್ತ ಕೋರ್ಟ್‌ ಗಮನಹರಿಸಬೇಕು ಎಂದು ಕೇರಳ ಪರ ವಕೀಲ ಜಯದೀಪ್‌ ಗುಪ್ತಾ ಮನವಿ ಮಾಡಿದರು. ಬೆಂಗಳೂರಿಗೆ ಕಾವೇರಿ ನೀರು ಪೂರೈಸುವಂತೆ ಕೋರಿ ನಾಗರಿಕರ ಪರ ಸಲ್ಲಿಕೆಯಾಗಿದ್ದ ಮಧ್ಯಂತರ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಪೀಠ ಅವಕಾಶ ನೀಡಿತು.

ನೀರು ಬಿಡದಿರಲು ಒತ್ತಾಯ
ಮಂಡ್ಯ: ತಮಿಳುನಾಡಿಗೆ ಎರಡು ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂದು ಸುಪ್ರೀಂಕೋರ್ಟ್‌ ಬುಧವಾರ ಮತ್ತೆ ಆದೇಶ ನೀಡಿದ್ದು, ಇದನ್ನು ರಾಜ್ಯ ಸರ್ಕಾರ ಪಾಲನೆ ಮಾಡಬಾರದು ಎಂದು ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನರಿಗೆ ಕುಡಿಯಲು ನೀರಿಲ್ಲ, ಇಷ್ಟು ದಿನಗಳು ನ್ಯಾಯಾಲಯಕ್ಕೆ ಗೌರವ ಕೊಟ್ಟು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಇನ್ನು ಮುಂದೆ ನೀರು ಬಿಡಲು ಸಾಧ್ಯವಿಲ್ಲ. ರೈತರ ಬೆಳೆಗಳು ಒಣಗಿವೆ. ಅದಕ್ಕೆ ಸೂಕ್ತ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ರಾಜ್ಯದ ವಕೀಲರು ಸಮಗ್ರವಾಗಿ ವಾದ ಮಂಡಿಸುವಲ್ಲಿ ವಿಫಲರಾಗಿದ್ದಾರೆ. ಸುಪ್ರೀಂಕೋರ್ಟ್‌ ರೈತರ ಕಷ್ಟ ಅರಿಯುವಲ್ಲಿ ಸೋತಿದೆ. ರೈತರು ಹಾಗೂ ಜಾನುವಾರುಗಳ ಬಗ್ಗೆ ಕಾಳಜಿ ಇಲ್ಲದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ವರ್ತಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

‘ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸಿದರೆ ಹೋರಾಟ ಮಾಡಬೇಕಾಗುತ್ತದೆ. ನಾವೇ ಅಣೆಕಟ್ಟೆಯ ಗೇಟ್‌ ಕಾಯುವ ಕೆಲಸ ಮಾಡುತ್ತೇವೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು. ನಂತರ ಬೆಳೆಗಳಿಗೆ ನೀರು ಬಿಡುವ ಬಗ್ಗೆ ಆಲೋಚನೆ ಮಾಡಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT