ADVERTISEMENT

ಕಾಶ್ಮೀರ ಕಣಿವೆಯಲ್ಲಿ ಮತ್ತಷ್ಟು ಚಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ಶ್ರೀನಗರ (ಪಿಟಿಐ): ಲಡಾಖ್ ಪ್ರದೇಶದಲ್ಲಿ ಶೀತ ಗಾಳಿ ತೀವ್ರತೆ ಅಧಿಕವಾಗಿದ್ದು, ಕಾಶ್ಮೀರ ಕಣಿವೆ ಚಳಿಯಿಂದ ಥರಗುಟ್ಟುತ್ತಿದೆ. ಇಲ್ಲಿನ ಪಹಲ್ಗಾಂ ಮತ್ತು ಗುಲ್ಮಾರ್ಗ್ ಪ್ರವಾಸಿ ಕೇಂದ್ರಗಳಲ್ಲಿ ಮೈನಸ್ 14 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಕಾರ್ಗಿಲ್‌ನಲ್ಲಿ ಮಂಗಳವಾರ ರಾತ್ರಿ ಮೈನಸ್ 22 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ. ಲಡಾಕ್ ಮತ್ತು ಲೇಹ್‌ಗಳಲ್ಲಿ ಮೈನಸ್ 19 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣತೆ ಕಂಡುಬಂದಿದೆ. ಶ್ರೀನಗರ, ಕೊಕೆರ್ನಾಗ್ ಮತ್ತು ಕ್ಯೂಜಿಗುಂಡ್‌ಗಳಲ್ಲಿಯೂ ಚಳಿ ಉಲ್ಬಣಗೊಂಡಿದೆ. ರಾಜಸ್ತಾನದಲ್ಲಿ ತಗ್ಗಿದ ಚಳಿ: ಜೈಪುರ (ಪಿಟಿಐ): ರಾಜಸ್ತಾನದಲ್ಲಿ ಚಳಿಯ ತೀವ್ರತೆ ಕಡಿಮೆಯಾಗಿದ್ದು ಜನರಲ್ಲಿ ಸ್ವಲ್ಪ ನೆಮ್ಮದಿ ಮೂಡಿಸಿದೆ.

ಬಿಕನೇರ್‌ನಲ್ಲಿ ಕನಿಷ್ಠ 4.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ,  ಶ್ರೀ ಗಂಗಾನಗರ ಮತ್ತು ಚುರು ಪ್ರದೇಶಗಳಲ್ಲಿ ಕನಿಷ್ಠ ಉಷ್ಣಾಂಶ 4.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಜೈಪುರದಲ್ಲಿ 5.6 ಡಿಗ್ರಿ ಕನಿಷ್ಠ ಉಷ್ಣತೆ ಇತ್ತು. ಮೋಡದ ವಾತಾವರಣ ರೂಪುಗೊಳ್ಳುತ್ತಿದ್ದು, ರಾತ್ರಿ ಉಷ್ಣತೆ ಮುಂದಿನ ಎರಡು ದಿನಗಳಲ್ಲಿ ಹೆಚ್ಚುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಅರುಣಾಚಲ ಪ್ರದೇಶದಲ್ಲಿ ಹಿಮಪಾತ: ಇಟಾನಗರ (ಪಿಟಿಐ): ಅರುಣಾಚಲ ಪ್ರದೇಶದ ಆಳಿತ ಜಿಲ್ಲೆ ತವಾಂಗ್ ಸೇರಿದಂತೆ ವಿವಿಧೆಡೆ ಸುರಿಯುತ್ತಿರುವ ಭಾರಿ ಹಿಮಪಾತ ಜನಜೀವನಕ್ಕೆ ಅಡ್ಡಿಯಾಗಿದೆ.

ಪಶ್ಚಿಮ ಕಮಾಂಗ್, ಪಶ್ಚಿಮ ಸಿಯಾಂಗ್ ಮತ್ತು ಸಿಬಾಂಗ್ ಕಣಿವೆ ಜಿಲ್ಲೆಗಳಲ್ಲಿ ಸಹ ಹಿಮಪಾತ ತೀವ್ರವಾಗಿದೆ. ತವಾಂಗ್ ಪಟ್ಟಣದಾದ್ಯಂತ ಮಂಗಳವಾರದಿಂದಲೂ ಸುಮಾರು ಏಳು ಅಡಿಗಳಷ್ಟು ಹಿಮ ಆವರಿಸಿದೆ. ಇದರಿಂದ ಸಾರಿಗೆ ಮತ್ತು ಸಂವಹನ ಸಂಪರ್ಕ, ನೀರು ಸರಬರಾಜು, ವಿದ್ಯುತ್ ಮತ್ತು ದೂರವಾಣಿ ಸಂಪರ್ಕಗಳಿಗೆ ಅಡಚಣೆಯಾಗಿದೆ. ಅನೇಕ ಪ್ರವಾಸಿಗರು ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಎಂದು ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ನಿರ್ದೇಶಕ ಲೇಕಿ ಪುಂಟ್ಸೋ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.