ADVERTISEMENT

ಕಾಶ್ಮೀರ: ಗೃಹ ಸಚಿವರಿಗೆ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಕೇಂದ್ರ ಸರ್ಕಾರ ನೇಮಿಸಿದ್ದ ಜಮ್ಮು ಮತ್ತು ಕಾಶ್ಮೀರದ ಸಂಧಾನಕಾರರು ಗೃಹ ಸಚಿವ ಪಿ.ಚಿದಂಬರಂ ಅವರಿಗೆ ಬುಧವಾರ ವರದಿ ಸಲ್ಲಿಸಿದರು.

ಕಾಶ್ಮೀರದ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಸಲಹೆಗಳನ್ನು ಒಳಗೊಂಡ ವರದಿಯನ್ನು ಸಂಧಾನಕಾರರಾದ ಹಿರಿಯ ಪತ್ರಕರ್ತ ದಿಲೀಪ್ ಪಡಗಾಂವ್‌ಕರ್, ಮಾಹಿತಿ ಆಯೋಗದ ಮಾಜಿ ಅಧ್ಯಕ್ಷ ಎಂ.ಎಂ.ಅನ್ಸಾರಿ ಮತ್ತು ರಾಧಾ ಕುಮಾರ್ ಅವರ ಸಲಿಸಿದರು.

ಕಳೆದ ವರ್ಷ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ನಿರ್ಧಾರವಾದಂತೆ ಸಂಧಾನಕಾರರನ್ನು ನೇಮಿಸಿ ಒಂದು ವರ್ಷದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ನಿಗದಿಯಂತೆ ಅವರು ಒಂದು ವರ್ಷದಲ್ಲಿ ವರದಿ ಸಲ್ಲಿಸಿದ್ದಾರೆ.
ಸಂಧಾನಕಾರರು ಹುರಿಯತ್ ಸಂಘಟನೆಯ ಅಧ್ಯಕ್ಷ ಮೌಲಾನಾ ಅಬ್ಬಾಸ್ ಅನ್ಸಾರಿ ಅವರನ್ನು ಹೊರತುಪಡಿಸಿ ಬೇರಾವುದೇ ಪ್ರತ್ಯೇಕತಾವಾದಿ ಸಂಘಟನೆಯ ಮುಖಂಡರನ್ನು ಭೇಟಿ ಮಾಡಲಿಲ್ಲ. ರಾಜ್ಯದ ಎಲ್ಲ ಕಡೆಗಳಲ್ಲಿ ಸಂಚರಿಸಿ ಪ್ರತ್ಯೇಕತಾವಾದಿಗಳ ಬೇಡಿಕೆ ಮತ್ತು ನಾಗರಿಕ ಅಗತ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.

ADVERTISEMENT

ಸುಮಾರು 700 ನಿಯೋಗಗಳನ್ನು ಭೇಟಿ ಮಾಡಿದ ಸಂಧಾನಕಾರರು ಎಲ್ಲವುಗಳ ಅಹವಾಲುಗಳನ್ನೂ ಆಲಿಸಿದ್ದಾರೆ. ಇದಲ್ಲದೆ ಮೂರು ದುಂಡು ಮೇಜಿನ ಪರಿಷತ್ತನ್ನು ಹಾಗೂ ಮೂರು ಬಹಿರಂಗ ಸಭೆಗಳನ್ನು ನಡೆಸಲಾಗಿದೆ.

 ಸಂಧಾನಕಾರರಾಗಿ ನೇಮಕವಾಗುವ ಮೊದಲು ರಾಧಾ ಕುಮಾರ್ ಅವರು ಹುರಿಯತ್‌ನ ಎರಡೂ ಬಣಗಳ ನಾಯಕರ ಮಧ್ಯೆ ಸಾಕಷ್ಟು ಬಾರಿ ಚರ್ಚೆ ನಡೆಸಿದ್ದರು. ಆದರೆ ಅವರು ಸಂಧಾನಕಾರರಾಗಿ ನೇಮಕಗೊಂಡ ನಂತರ ಪ್ರತ್ಯೇಕತಾವಾದಿ ಮುಖಂಡರು ಅವರಿಂದ ದೂರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.