ನವದೆಹಲಿ(ಪಿಟಿಐ): ಭಾರತ–ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಗೆ ಮುನ್ನ ಶನಿವಾರ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಶಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಜತೆಗೆ ಹುರಿಯತ್ ನಾಯಕ ಬಿಲಾಲ್ ಲೋನ್‌ನನ್ನೂ ಬಂಧಿಸಲಾಗಿದೆ. ಭಾರತಕ್ಕೆ ಬರಲಿರುವ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಜ್ ಅಜೀಜ್ ಅವರನ್ನು ಭೇಟಿಯಾಗುವ ಉದ್ದೇಶದಿಂದ ಶಬೀರ್ ಶಾ, ಇನ್ನಿಬ್ಬರು ಸಹಚರರು ನವದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಲೇ ಭದ್ರತಾ ಸಿಬ್ಬಂದಿ ಅವರನ್ನು ಬಂಧಿಸಿದರು.
ಕೇಂದ್ರೀಯ ಭದ್ರತಾ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಅವರನ್ನು ದಕ್ಷಿಣ ದೆಹಲಿಯಲ್ಲಿ ಅವರು ತಂಗಲು ಕಾಯ್ದಿರಿಸಿದ್ದ ಅತಿಥಿಗೃಹಕ್ಕೆ ಕರೆದೊಯ್ದರು. ಸರ್ತಾಜ್ ಅಜೀಜ್ ಮತ್ತು ಅಜಿತ್ ದೋಭಾಲ್ ನಡುವೆ ಸೋಮವಾರ ಮಾತುಕತೆ ನಿಗದಿಯಾಗಿರುವ ಕಾರಣ ದೆಹಲಿಯಲ್ಲಿ ಕಾಶ್ಮೀರ ಪ್ರತ್ಯೇಕತಾವಾದಿಗಳ ಚಲವಲನದ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಭದ್ರತಾ ಸಿಬ್ಬಂದಿ ಶಾ ಅವರಿಗೆ ತಿಳಿಸಿದರು.
ಶಾ ಅವರೊಂದಿಗೆ ಮತ್ತಿಬ್ಬರು ಪ್ರತ್ಯೇಕತಾವಾದಿ ನಾಯಕರಾದ ಮೊಹಮ್ಮದ್ ಅಬ್ದುಲ್ಲಾ ತಾರಿ ಮತ್ತು ಜಮೀರ್ ಅಹ್ಮದ್ ಹಾಗೂ ಬಿಲಾಲ್ ಲೋನ್ ಅವರನ್ನೂ ದಕ್ಷಿಣ ದೆಹಲಿ ಅತಿಥಿಗೃಹದಲ್ಲಿ ಬಂಧನದಲ್ಲಿರಿಸಲಾಗಿದೆ.
‘ನೀವು ಮರಳಿ ಶ್ರೀನಗರಕ್ಕೆ ಹೋಗುವುದಾದರೆ ನಮ್ಮ ಅಭ್ಯಂತರ ಇಲ್ಲ. ಇಲ್ಲದಿದ್ದರೆ ನೀವು ತಂಗಲಿರುವ ಅತಿಥಿಗೃಹದಲ್ಲಿ ಬಂಧನದಲ್ಲಿಡಲಾಗುವುದು ಎಂದು ಭದ್ರತಾ ಸಿಬ್ಬಂದಿ ನಮಗೆ ತಿಳಿಸಿದರು’ ಎಂದು ಜಮೀರ್ ಹೇಳಿದರು.
ಶ್ರೀನಗರದಿಂದ ಹೊರಡುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಶಬೀರ್ ಶಾ, ‘ಪಾಕಿಸ್ತಾನ ಅಧಿಕಾರಿಗಳು ಭಾರತಕ್ಕೆ ಬಂದಾಗ ಅವರನ್ನು ಭೇಟಿಯಾಗಲು ಹಿಂದಿನ ಯಾವ ಪ್ರಧಾನಿಯೂ ಅಡ್ಡಿಪಡಿಸಿರಲಿಲ್ಲ’ ಎಂದರು.
‘ಕಾಶ್ಮೀರ ಸಮಸ್ಯೆ ಕುರಿತು ಪಾಕಿಸ್ತಾನದ ನಿಲುವು ಸ್ಪಷ್ಟವಾಗಿದೆ. ಮಾತುಕತೆಯ ವೇಳೆ ಅವರು ತಮ್ಮ ನಿಲುವು ಸ್ಪಷ್ಟಪಡಿಸುತ್ತಾರೆ. ಭಾರತ ಕೂಡ ಕಾಶ್ಮೀರ ಸಮಸ್ಯೆ ಕುರಿತು ಮಾತುಕತೆ ನಡೆಸಬೇಕು’ ಎಂದರು.
ಹುರಿಯತ್ ಕಾನ್ಫರೆನ್ಸ್‌ನಿಂದ ಕಳೆದ ವರ್ಷ ಹೊರ ಬಂದು ಪ್ರತ್ಯೇಕ ಬಣ ರಚಿಸಿಕೊಂಡಿರುವ ಶಾ ಅವರನ್ನು ಶುಕ್ರವಾರ ಕಾಶ್ಮೀರದಲ್ಲಿ ಗೃಹ ಬಂಧನದಲ್ಲಿಡಲಾಗಿತ್ತು. ನಮಾಜ್ ಸಲ್ಲಿಸಲು ಕೂಡ ಅವಕಾಶ ಕೊಟ್ಟಿರಲಿಲ್ಲ.
ಭಾನುವಾರ ಮಧ್ಯಾಹ್ನ ನವದೆಹಲಿಗೆ ಬಂದಿಳಿಯಲಿರುವ ಪಾಕಿಸ್ತಾನ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಭೇಟಿಗೆ ಪಾಕಿಸ್ತಾನ ಹೈಕಮಿಷನ್ ಸೈಯದ್ ಶಾ ಅಲಿ ಗಿಲಾನಿ ಸೇರಿದಂತೆ ಎಲ್ಲ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕರಿಗೆ ಆಹ್ವಾನ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.