ADVERTISEMENT

ಕಾಶ್ಮೀರ: ಯುವಕ ಬಲಿ-ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 17:10 IST
Last Updated 5 ಫೆಬ್ರುವರಿ 2011, 17:10 IST

ಶ್ರೀನಗರ (ಐಎಎನ್‌ಎಸ್): ಕಾಶ್ಮೀರದ ಕುಪ್ವಾರದಲ್ಲಿ ಪ್ರತ್ಯೇಕತಾವಾದಿಗಳ ವಿರುದ್ಧ ಸೇನೆಯ ‘ಹೊಂಚುಕಾರ್ಯಾಚರಣೆ’ ಸಂದರ್ಭದಲ್ಲಿ ಗುಂಡು ತಗುಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಇದರ ಬೆನ್ನಲ್ಲೇ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನಾ ಘಟಕದ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಚೋಗಲ್ ಗ್ರಾಮದಲ್ಲಿ ಈ ದುರ್ಘಟನೆ  ನಡೆದಿದೆ. ಸೇನೆಯ ಗುಂಡೇಟಿಗೆ ಬಲಿಯಾದ ಯುವಕನನ್ನು ಮನ್ಸೂರ್ ಅಹ್ಮದ್ ಮ್ಯಾಗ್ರೆ (22) ಎಂದು ಗುರುತಿಸಲಾಗಿದೆ.

ಮನೆಯಲ್ಲಿದ್ದ ಮ್ಯಾಗ್ರೆಯನ್ನು ಹೊರಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದರಿಂದ ಮೃತಪಟ್ಟಿದ್ದಾನೆ ಎಂದು ಆತನ ಮನೆಯವರು   ಆರೋಪಿಸಿದ್ದಾರೆ.

ಘಟನೆಗೆ ಕಾರಣರಾದ ಸೈನಿಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಶವವನ್ನು ಇಟ್ಟುಕೊಂಡು ರಸ್ತೆ ತಡೆ ನಡೆಸಿದರು. ಘಟನೆಗೆ ಕಾರಣವಾಗಿರುವ ಸೇನಾ ಘಟಕದ ವಿರುದ್ಧ ಮೊಕದ್ದಮೆ ಹೂಡುವ ಸ್ಪಷ್ಟ ಭರವಸೆಯನ್ನು ಹಿರಿಯ ಅಧಿಕಾರಿಗಳು ನೀಡಿದ ನಂತರ ಪರಿಸ್ಥಿತಿ ತಿಳಿಯಾಗಿ ಮೃತನ ಅಂತ್ಯಸಂಸ್ಕಾರ  ನಡೆಯಿತು. 

ಈ ಮಧ್ಯೆ, ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೂಲಕ ಘಟನೆಯ ತನಿಖೆಗೂ ಆದೇಶಿಸಿದ್ದು, ಎರಡು ವಾರಗಳಲ್ಲಿ ವರದಿ ನೀಡಲು    ತಿಳಿಸಲಾಗಿದೆ.

ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಸಿದ್ಧತೆ ನಡೆಸಿ ಸೈನಿಕರು ನಿರ್ದಿಷ್ಟ ಜಾಗವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದರು.

ಈ ಸಂದರ್ಭದಲ್ಲಿ ಇಬ್ಬರು ಆ ಪ್ರದೇಶದಲ್ಲಿ ಚಲಿಸುತ್ತಿದ್ದುದನ್ನು ಗಮನಿಸಿದ ಸೈನಿಕರು ಶರಣಾಗಲು ಸೂಚಿಸಿದರು.  ಆದರೆ ಕತ್ತಲಿನಲ್ಲಿ ತಪ್ಪಿಸಿಕೊಳ್ಳಲು ಅವರು ಯತ್ನಿಸಿದಾಗ ಹಾರಿಸಿದ ಗುಂಡಿಗೆ ಮ್ಯಾಗ್ರೆ    ಬಲಿಯಾದ ಎಂದು ಸೇನಾ ಮೂಲಗಳು  ತಿಳಿಸಿವೆ.

ಈ ವರ್ಷ ನಡೆದ ಮೊದಲ ಪ್ರಕರಣ ಇದಾಗಿದ್ದು, ಕಳೆದ ವರ್ಷ 100 ನಾಗರಿಕರು ಸೈನಿಕರ ಕಾರ್ಯಾಚರಣೆಗೆ ಬಲಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.