ADVERTISEMENT

ಕಿಂಗ್‌ಫಿಷರ್ ವಿಮಾನ ಹಾರಾಟ ಪುನರಾರಂಭಕ್ಕೆ ಸಿದ್ಧತೆ

ಆಡಳಿತಾತ್ಮಕ ಮಂಜೂರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 19:59 IST
Last Updated 10 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ವಿಮಾನ ಹಾರಾಟ ಪುನರಾರಂಭಿಸಲು ಆಡಳಿತಾತ್ಮಕ ಮಂಜೂರು ನೀಡಬೇಕೆಂದು ಕಿಂಗ್‌ಫಿಷರ್ ಏರ್‌ಲೈನ್ಸ್ ಬುಧವಾರ ವಿಮಾನಯಾನ ಮಹಾನಿರ್ದೇಶನಾಲಯವನ್ನು (ಡಿಜಿಸಿಎ) ಕೋರಿದೆ.

`ಹಣಕಾಸು ಮತ್ತು ಸಂಚಾರ ಯೋಜನೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿದ್ದೇವೆ. ಮತ್ತೆ ವಿಮಾನ ಹಾರಾಟಕ್ಕಾಗಿ ಯುಬಿ ಸಮೂಹ ಹಣ ನೀಡಲಿದೆ. ವಿಮಾನ ಹಾರಾಟದ ಪರವಾನಗಿ ನವೀಕರಣ ಮಾಡುವಂತೆಯೂ ಇದೇ ಸಂದರ್ಭದಲ್ಲಿ ಕೋರಿದ್ದೇವೆ' ಎಂದು ಡಿಜಿಸಿಎ ಮುಖ್ಯಸ್ಥ ಅರುಣ್ ಮಿಶ್ರಾ ಜತೆ ನಡೆಸಿದ ಸಭೆ ಬಳಿಕ ಕಿಂಗ್‌ಫಿಷರ್ ಏರ್‌ಲೈನ್ಸ್ ಸಿಇಒ ಸಂಜಯ ಅಗರವಾಲ್ ಸುದ್ದಿಗಾರರಿಗೆ ತಿಳಿಸಿದರು.

ಈ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರುವ ಮುನ್ನ ಕಿಂಗ್‌ಫಿಷರ್ ಸಲ್ಲಿಸಿದ ಯೋಜನೆಯನ್ನು ವಿಸ್ತೃತವಾಗಿ ಪರಿಶೀಲಿಸಲಾಗುವುದು ಎಂದು ಡಿಜಿಸಿಎ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಕಿಂಗ್‌ಫಿಷರ್ ಐದು ಏರ್‌ಬಸ್ ಎ-320 ಮತ್ತು ಎರಡು ಟರ್ಬೊಪ್ರಾಪ್ ಎಟಿಆರ್ ಏರ್‌ಕ್ರಾಫ್ಟ್ ಸೇವೆ ಶೀಘ್ರದಲ್ಲೇ ಆರಂಭಿಸಲಿದೆ. ಬಳಿಕ ಹಂತ ಹಂತವಾಗಿ ಈ ಸಂಖ್ಯೆ 20ಕ್ಕೆ ಹೆಚ್ಚಲಿದೆ.

ವಿಮಾನ ಹಾರಾಟಕ್ಕೆ ಸಂಬಂಧಿಸಿದಂತೆ ಲಿಖಿತ ರೂಪದಲ್ಲಿ ಭರವಸೆ ನೀಡುವಂತೆ ತಿಂಗಳ ಹಿಂದೆ ನಡೆದ ಸಭೆಯಲ್ಲಿ ಡಿಜಿಸಿಎ ಸೂಚಿಸಿತ್ತು. ಕಿಂಗ್‌ಫಿಷರ್ ವಿಮಾನಗಳ ಹಾರಾಟ ಪರವಾನಗಿಯನ್ನು ಡಿಜಿಸಿಎ ಕಳೆದ ಅಕ್ಟೋಬರ್‌ನಲ್ಲಿ ರದ್ದುಪಡಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.