ADVERTISEMENT

ಕಿಂಗ್‌ಫಿಷರ್ ಸಂಕಷ್ಟ: ದಂಡನೆ ನೀಡಲು ಡಿಜಿಸಿಎ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಕಿಂಗ್‌ಫಿಷರ್, ಹೊಸ ವೇಳಾಪಟ್ಟಿ ಪ್ರಕಾರ ಗುರುವಾರದಿಂದ ಹಲವಾರು ವಿಮಾನಗಳ ಸೇವೆಯನ್ನು ಆರಂಭಿಸಿದೆ.

ಆದರೆ, ನಿಯಮಾವಳಿಗಳನ್ನು ಉಲ್ಲಂಘಿಸಿರುವ ಕಿಂಗ್‌ಫಿಷರ್ ವಿರುದ್ಧ ದಂಡನಾರ್ಹ ಕ್ರಮ ಕೈಗೊಳ್ಳಬಹುದೇ ಎಂಬ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಪರಿಶೀಲಿಸುತ್ತಿದೆ.

ಈ ಮಧ್ಯೆ, ನಷ್ಟಕ್ಕೆ ಸಿಲುಕಿರುವ ಕಿಂಗ್‌ಫಿಷರ್‌ಗೆ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿವೆ.

ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ಕಳೆದುಕೊಳ್ಳುವ ವಿಮಾನಯಾನ ಕಂಪೆನಿಗೆ ಸಾಲ ನೀಡುವ ಆಸಕ್ತಿ ಬ್ಯಾಂಕ್‌ಗಳಿಗೆ ಇಲ್ಲ. ಬ್ಯಾಂಕ್‌ಗಳು ತಮ್ಮ ಕೈ ತಾವು ಸುಟ್ಟಿಕೊಳ್ಳುವುದಿಲ್ಲ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕಿಂಗ್‌ಫಿಷರ್ ಸಾವಿರ ಕೋಟಿ ರೂಪಾಯಿ ನಷ್ಟಕ್ಕೆ ಒಳಗಾಗಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಏರ್‌ಲೈನ್ಸ್ ಪ್ರವರ್ತಕರು ಹೊಸದಾಗಿ ಹೂಡಿಕೆ ಮಾಡುವತನಕ ಅದಕ್ಕೆ ಸಾಲ ನೀಡುವುದಿಲ್ಲ ಎಂಬ ಸೂಚನೆಯನ್ನೂ 18 ಬ್ಯಾಂಕ್‌ಗಳ ಒಕ್ಕೂಟ ನೀಡಿದೆ.

ಯುಕೊ ಬ್ಯಾಂಕ್, ಕಿಂಗ್‌ಫಿಷರ್ ಖಾತೆಯನ್ನು `ಲಾಭದಾಯಕವಲ್ಲದ ಆಸ್ತಿ~ ಎಂದು ಘೋಷಿಸಿದೆ. ಆ ಖಾತೆಯನ್ನು ಮತ್ತೆ ಚಾಲನೆಗೆ ತಂದಲ್ಲಿ ಸಾಲದ ಕುರಿತಾದ ಮನವಿಯನ್ನು ಪರಿಗಣಿಸಬಹುದು ಎಂದು ಆ ಬ್ಯಾಂಕ್ ಅಧ್ಯಕ್ಷ ಅರುಣ್ ಕೌಲ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ನಾಗರಿಕ ವಿಮಾನ ಯಾನ ಸಚಿವ ಅಜಿತ್‌ಸಿಂಗ್, `ಅದರ ವ್ಯವಹಾರಗಳು ಉತ್ತಮವಾಗಿವೆ ಎಂದು ಅನಿಸಿದರೆ ಅವರಿಗೆ (ಕಿಂಗ್‌ಫಿಷರ್) ಬ್ಯಾಂಕುಗಳು ತಮ್ಮ ಸಾಲ ನೀಡುತ್ತವೆ. ಇದೇ ವೇಳೆ ಖಾಸಗಿ ಕಂಪೆನಿಗಳಿಗೆ ಸಾಲ ನೀಡುವಂತೆಯೂ ಸರ್ಕಾರ ಕೇಳಿಲ್ಲ. ಹೀಗಾಗಿ ಇದನ್ನು ಬ್ಯಾಂಕುಗಳೇ ನಿರ್ಧರಿಸಬೇಕು~ ಎಂದಿದ್ದಾರೆ.

ನಿಯಮ ಉಲ್ಲಂಘಿಸಿದ ಕಿಂಗ್‌ಫಿಷರ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಜಿತ್‌ಸಿಂಗ್, `ಎಲ್ಲ ಸಾಧ್ಯತೆಗಳನ್ನು ಡಿಜಿಸಿಎ ಪರಿಶೀಲಿಸುತ್ತಿದೆ. ಅವರು ಹಲವು ವರದಿಗಳನ್ನು ಸ್ವೀಕರಿಸಿದ್ದಾರೆ. ಅವರು ಹೇಗೆ ಮತ್ತು ಎಷ್ಟು ಸುರಕ್ಷಿತ ಸೇವೆ ನೀಡುತ್ತಾರೆ ಎನ್ನುವುದು ಈಗ ಪ್ರಮುಖವಾಗಿದೆ ಎಂದರು.

ಇದರ ಭಾಗವಾಗಿ ಸರ್ಕಾರ ಕಾದು ನೋಡುವ ತಂತ್ರದ ಮೊರೆ ಹೋಗಿದೆ. ಕಿಂಗ್‌ಫಿಷರ್ ವಿರುದ್ಧ ಕೈಗೊಳ್ಳಬಹುದಾದ ದಂಡನಾ ಕ್ರಮಗಳ ಬಗ್ಗೆ ಡಿಜಿಸಿಎ ಪರಿಶೀಲಿಸುತ್ತಿದ್ದು, ಭಾರತೀಯ ವಿಮಾನ ನಿಯಂತ್ರಣ ಪ್ರಾಧಿಕಾರದ ಸಲಹೆ ಪಡೆದು ಮುಂದಿನ ವಾರ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ದೃಢಪಡಿಸಿವೆ.

ಬೆಂಗಳೂರು ವರದಿ: ಏನತ್ಮಧ್ಯೆ ಮುಟ್ಟುಗೋಲು ಹಾಕಿಕೊಳ್ಳಲಾದ ಕಿಂಗ್‌ಫಿಷರ್ ಬ್ಯಾಂಕ್ ಖಾತೆಗಳ ಮೇಲಿನ ನಿರ್ಬಂಧ ತೆಗೆದು ಹಾಕುವ ಸಂಬಂಧ ಆದಾಯ ತೆರಿಗೆ ಇಲಾಖೆ ಮತ್ತು ಕಿಂಗ್‌ಫಿಷರ್ ನಡುವೆ ಮಾತುಕತೆ ನಡೆಯುತ್ತಿದೆ.

ತೆರಿಗೆ ಹಣ ಪಾವತಿಸಿದ ಕಾರಣ ಕಳೆದ ವಾರ ಆದಾಯ ತೆರಿಗೆ ಇಲಾಖೆ ಈ ವಿಮಾನಯಾನ ಸಂಸ್ಥೆಯ ಖಾತೆಗಳಿಗೆ ಮುಟ್ಟುಗೋಲು ಹಾಕಿತ್ತು. ಇದೇ ಕಾರಣಕ್ಕೆ ತನಗೆ ವೇಳಾಪಟ್ಟಿಯಂತೆ ವಿಮಾನ ಹಾರಾಟ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಕಿಂಗ್‌ಫಿಷರ್ ಹೇಳಿತ್ತು.
 
ಆದಾಯ ತೆರಿಗೆ ಇಲಾಖೆ ಹಾಗೂ ಕಿಂಗ್‌ಫಿಷರ್ ನಡುವೆ ಮಾತುಕತೆ ಮುಂದುವರಿದಿದೆ ಎಂದು ಹಿರಿಯ ಐಟಿ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.