ADVERTISEMENT

ಕಿಂಗ್‌ಫಿಷರ್: ಹಲವು ನಗರಗಳಿಗೆ ನೇರ ಸಂಚಾರ ರದ್ದು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಹಣಕಾಸು ಬಿಕ್ಕಟ್ಟಿನ ಸುಳಿಯಲ್ಲಿರುವ ಕಿಂಗ್‌ಫಿಷರ್ ಸಂಸ್ಥೆಯ ವಿಮಾನಗಳು ಇನ್ನು ಮುಂದೆ ಕೆಲವು ಪ್ರಮುಖ ನಗರಗಳು ಹಾಗೂ ಎರಡನೇ ಶ್ರೇಣಿಯ ನಗರಗಳಿಗೆ ನೇರ ಸಂಚಾರ ಮಾಡುವುದಿಲ್ಲ.
ನಾಲ್ಕು ದಿನಗಳ ಹಿಂದೆ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಕಂಪೆನಿ ಸಲ್ಲಿಸಿದ ಹೊಸ ವೇಳಾಪಟ್ಟಿಯಿಂದ ಇದು ಗೊತ್ತಾಗಿದೆ.

ಜೈಪುರ, ತಿರುವನಂತಪುರ, ನಾಗಪುರ, ಹೈದರಾಬಾದ್‌ಗಳು ನೇರ ಸಂಚಾರ ಕಡಿತವಾಗುವ  ನಗರಗಳಲ್ಲಿ ಸೇರಿವೆ ಎಂದು ಮೂಲಗಳು ತಿಳಿಸಿವೆ.

ಹೀಗಾಗಿ ಇನ್ನು ಮುಂದೆ ಈ ಮುಖ್ಯ ನಗರಗಳು ಹಾಗೂ ಎರಡನೇ ಶ್ರೇಣಿಯ ನಗರಗಳಿಗೆ ತೆರಳಬೇಕಾದ ಕಿಂಗ್‌ಫಿಷರ್ ಪ್ರಯಾಣಿಕರು ಸಂಸ್ಥೆಯ ಪ್ರಮುಖ ಕಾರ್ಯಕೇಂದ್ರಗಳಾದ ಮುಂಬೈ ಅಥವಾ  ಬೆಂಗಳೂರಿನ ಮೂಲಕ ಸಂಚರಿಸ ಬೇಕಾಗುತ್ತದೆ.

ಇದೀಗ ದಿನಕ್ಕೆ 28 ವಿಮಾನಗಳನ್ನು ಓಡಿಸುತ್ತಿರುವ ಕಂಪೆನಿಯು ಇನ್ನು ಒಂದು ವಾರ ಅಥವಾ 10 ದಿನಗಳಲ್ಲಿ ಇನ್ನೂ 16 ವಿಮಾನಗಳನ್ನು ಓಡಿಸಲು ಯತ್ನಿಸುವುದಾಗಿ ಡಿಜಿಸಿಎಗೆ ತಿಳಿಸಿದೆ.

ಪ್ರಸ್ತುತ ಕಂಪೆನಿಯು 510 ಪೈಲಟ್‌ಗಳನ್ನು ಹೊಂದಿದ್ದು, ತನಗೆ ಪೈಲಟ್‌ಗಳ ಕೊರತೆಯೇನೂ ಇಲ್ಲ ಎಂದಿದೆ. ಒಂದು ದಿನಕ್ಕೆ ಒಂದು ವಿಮಾನ ಓಡಿಸಲು ಬೇಕಾಗುವ ಪೈಲಟ್‌ಗಳ ಸಂಖ್ಯೆ ಹತ್ತು ಆಗಿದೆ.

ಹಲವು ವಿಮಾನಗಳನ್ನು ಕಂಪೆನಿ ರದ್ದು ಮಾಡಿದ ಕ್ರಮದಿಂದಾಗಿ, ಈ ಮುಂಚೆ ಪ್ರಯಾಣ ದಟ್ಟಣೆಯ ಅವಧಿಯಲ್ಲಿನ ಪಡೆದಿದ್ದ ಸಂಚಾರ ಅನುಮತಿಯನ್ನು ಕಳೆದುಕೊಳ್ಳುವ ಸಂಭವವಿದೆ.

ಒಂದು ವಾರದಿಂದ ಸ್ಥಗಿತವಾಗಿರುವ ಮುಂಬೈ- ಸಿಂಗಪುರ ವಿಮಾನಯಾನವನ್ನು ಶೀಘ್ರವೇ ಪುನರಾರಂಭಿಸುವುದಾಗಿಯೂ ಕಂಪೆನಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಲಾಯಕ್ಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.