ADVERTISEMENT

ಕೀಳಾಗಿ ವರ್ತಿಸಿದ ಸಾರಿಗೆ ಅಧಿಕಾರಿ ಸಸ್ಪೆಂಡ್‌ಗೆ ಆಗ್ರಹ

ಜಯಪ್ರದಾ ವಾಹನದ ಕೆಂಪು ದೀಪದ ವಿವಾದ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

ಲಖನೌ (ಪಿಟಿಐ): ಸಮಾಜವಾದಿ ಪಕ್ಷದ ಸಂಸದೆ ಜಯಪ್ರದಾ ಅವರ ಕಾರಿನ ಮೇಲಿದ್ದ ಕೆಂಪು ದೀಪವನ್ನು ತೆಗೆಯುವಾಗ ತುಂಬಾ ಕೀಳಾಗಿ ವರ್ತಿಸಿದ ಸಾರಿಗೆ ಇಲಾಖೆಯ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂದು ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಒತ್ತಾಯಿಸಿದ್ದಾರೆ.

ನಗರಾಭಿವೃದ್ಧಿ ಸಚಿವ ಅಜಂ ಖಾನ್ ಎದುರಿನಲ್ಲೇ ಸಹಾಯಕ ಪ್ರಾದೇಶಿಕ ಅಧಿಕಾರಿ ಕುಶಲೇಂದ್ರ ಯಾದವ್ ಅವರು ಕೆಂಪು ದೀಪ ತೆಗೆಯುವ ಸಂದರ್ಭದಲ್ಲಿ ಕೀಳಾಗಿ ವರ್ತಿಸಿದ್ದಾರೆ. ಆದ್ದರಿಂದ ಈ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಹಾಗೂ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಸಿಂಗ್ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಒತ್ತಾಯಿಸಿದ್ದಾರೆ.

ಕೆಂಪು ದೀಪ ಅಳವಡಿಸಿದ ವಾಹನವು ರಸ್ತೆಯಲ್ಲಿ ಹೋಗುತ್ತಿದ್ದಾಗ ತಡೆದು ಕ್ರಮ ತೆಗೆದುಕೊಳ್ಳಬೇಕಿತ್ತು. ಕೆಂಪು ದೀಪ ಅಳವಡಿಕೊಳ್ಳುವುದು ಅಪರಾಧವಾದರೆ ಜಯಪ್ರದಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ಸಾರಿಗೆ ಅಧಿಕಾರಿಗಳು ಅಕ್ರಮವಾಗಿ ಜಯಪ್ರದಾ ಅವರ ನಿವಾಸಕ್ಕೆ ಪ್ರವೇಶಿಸಿ ಕೀಳು ಮಟ್ಟದಲ್ಲಿ ವರ್ತಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮೂರು ದಿನಗಳಲ್ಲಿ ಕ್ರಮ ಜರುಗಿಸದೆ ಇದ್ದರೆ ಜಯಪ್ರದಾ ಅವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ, ಹೈಕೋರ್ಟ್‌ಗೆ ದೂರು ಸಲ್ಲಿಸುವುದರ ಜತೆಗೆ ಲೋಕಸಭೆಯ ಅಧ್ಯಕ್ಷೆ ಮೀರಾ ಕುಮಾರ್ ಅವರನ್ನು ಭೇಟಿ ಮಾಡಿ ಹಕ್ಕುಚ್ಯುತಿ ಮಂಡನೆಗೆ ನೋಟಿಸ್ ನೀಡಲಿದ್ದಾರೆ ಎಂದು ಅಮರ್ ಸಿಂಗ್ ತಿಳಿಸಿದ್ದಾರೆ.

`ಜಯಪ್ರದಾ ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ ಎಂಬ ಕಾರಣಕ್ಕೆ ಸಮಾಜವಾದಿ ಪಕ್ಷದವರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.