ADVERTISEMENT

ಕುತೂಹಲ ಕೆರಳಿಸಿದ ಕೇರಳ ಚುನಾವಣೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ತಿರುನಂತಪುರಂ (ಪಿಟಿಐ): ಏಪ್ರಿಲ್‌ನಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೆ ನಾಟಕೀಯ ಬೆಳವಣಿಗೆಯಲ್ಲಿ ವಿ.ಎಸ್.ಅಚ್ಯುತಾನಂದನ್ ಅವರಿಗೆ ನಾಯಕತ್ವ ನೀಡುವುದಾಗಿ ಸಿಪಿಐ (ಎಂ) ಘೋಷಣೆ ಮಾಡಿರುವುದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಾಳಯವನ್ನು ಚಿಂತೆಗೀಡು ಮಾಡಿದೆ. ಮುಖ್ಯಮಂತ್ರಿ ಅಚ್ಯುತಾನಂದನ್ ಅವರ ವಿರೋಧಿ ಮತ್ತು ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಅವರು ಅಚ್ಯುತಾನಂದನ್ ಅವರಿಗೆ ಟಿಕೆಟ್ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ರಾಷ್ಟ್ರೀಯ ನಾಯಕರು ಮತ್ತು ಬೆಂಬಲಿಗರ ಒತ್ತಡದಿಂದಾಗಿ ಪಕ್ಷ ಹಠಾತ್ತನೆ ತನ್ನ ನಿರ್ಧಾರವನ್ನು ಬದಲಿಸಿ ವಿ.ಎಸ್ ಅವರಿಗೆ ಮತ್ತೆ ಚುನಾವಣೆಯ ನೇತೃತ್ವ ನೀಡಿರುವುದು ಕುತೂಹಲ ಮೂಡಿಸಿದೆ.

ಕಳೆದ ಲೋಕಸಭಾ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಯುಡಿಎಫ್ ಆತ್ಮವಿಶ್ವಾಸದಲ್ಲಿದೆ. ಸಾಕಷ್ಟು ಜನಪ್ರಿಯತೆ ಗಳಿಸಿರುವ ವಿ.ಎಸ್ ಅವರ ಗೈರುಹಾಜರಿ ಚುನಾವಣೆಯಲ್ಲಿ ಎಲ್‌ಡಿಎಫ್‌ಗೆ ಗಂಭೀರ ಹೊಡೆತ ನೀಡಲಿದೆ. ಇದು ಎದುರಾಳಿಗಳಿಗೆ ಮತ್ತಷ್ಟು ಬಲ ನೀಡುತ್ತದೆ ಎಂಬ ವಿಶ್ಲೇಷಣೆಗಳ ಹಿನ್ನೆಲೆಯಲ್ಲಿ ಎಡರಂಗ ತನ್ನ ನಿರ್ಧಾರವನ್ನು ಬದಲಿಸಿ ಪುನಃ ವಿ.ಎಸ್ ಅವರತ್ತ ಒಲವು ತೋರಿದೆ. ಇದನ್ನು ಸಿಪಿಐ (ಎಂ)ನ ಮಿತ್ರಪಕ್ಷಗಳು ಸಹ ಸ್ವಾಗತಿಸಿವೆ.

ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಉಮ್ಮನ್ ಚಾಂಡಿ ವಿರುದ್ಧದ ತಾಳೆಎಣ್ಣೆ ಆಮದು ಹಗರಣ, ಕೇಂದ್ರದ ‘ಓಟಿಗಾಗಿ ನೋಟು’ ಹಗರಣಗಳನ್ನು ಯುಡಿಎಫ್ ವಿರುದ್ಧದ ಪ್ರಮುಖ ಅಸ್ತ್ರಗಳನ್ನಾಗಿ ಬಳಸಲು ಎಲ್‌ಡಿಎಫ್ ಮುಂದಾಗಿದೆ.ಆದರೆ ಈ ಘಟನಾವಳಿಗಳನ್ನು ‘ಕೇವಲ ನಾಟಕ’ ಮತ್ತು ಸೋಲುವ ಭೀತಿಯಲ್ಲಿರುವ ಪಕ್ಷ ಮತಗಳನ್ನು ಸೆಳೆಯಲು ಅನುಸರಿಸುತ್ತಿರುವ ವ್ಯರ್ಥ ಪ್ರಯತ್ನ’ ಎಂದು ಕಾಂಗ್ರೆಸ್ ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.