ADVERTISEMENT

ಕುರ್ಲಾ ಕೋರ್ಟ್‌ಗೆ ಕೇಜ್ರಿವಾಲ್‌ ಹಾಜರು

ಅನುಮತಿ ಇಲ್ಲದೆ ರ್‍್ಯಾಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2016, 19:42 IST
Last Updated 20 ಜನವರಿ 2016, 19:42 IST
ನ್ಯಾಯಾಲಯಕ್ಕೆ ಹಾಜರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ನ್ಯಾಯಾಲಯಕ್ಕೆ ಹಾಜರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ಮುಂಬೈ (ಪಿಟಿಐ): ಕಳೆದ ಲೋಕಸಭಾ ಚುನಾವಣೆ ವೇಳೆ ಅನುಮತಿ ಪಡೆಯದೇ ರ್‍ಯಾಲಿ ನಡೆಸಿದ್ದ ದೂರು ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಬುಧವಾರ ಇಲ್ಲಿನ ಕುರ್ಲಾ ಕೋರ್ಟ್‌ಗೆ ಹಾಜರಾದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ರಿಚಾ ಖೇಡೇಕರ್‌ ಅವರು, ಕೇಜ್ರಿವಾಲ್‌ ಅವರಿಗೆ  ಖದ್ದು ಹಾಜರಾತಿಯಿಂದ ವಿನಾಯಿತಿ ನೀಡಿದರು.

ನಂತರ ಜಾಮೀನಿಗಾಗಿ ಕೇಜ್ರಿವಾಲ್‌ ಭದ್ರತಾ ಠೇವಣಿ ಸಲ್ಲಿಸಿದರು. ಕೇಜ್ರಿವಾಲ್‌ ಅವರಿಗೆ ಜಾಮೀನು ಪಡೆಯಲು ಅವರ ಸಹಾಯಕ ಸತೀಶ್‌ ಜೈನ್‌ ಎಂಬುವವರು ಭದ್ರತಾ ಠೇವಣಿ ನೀಡಿದರು.

2014ರ ಮಾರ್ಚ್‌ನಲ್ಲಿ ಪಕ್ಷದ ಅಭ್ಯರ್ಥಿಗಳಾದ ಮೀರಾ ಸಾನ್ಯಾಲ್‌ ಮತ್ತು ಮೇಧಾ ಪಾಟ್ಕರ್‌  ಪರ ಪ್ರಚಾರ ನಡೆಸಲು ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ಕೇಜ್ರಿವಾಲ್‌ ಹಾಗೂ ಇತರರ ವಿರುದ್ಧ ಮುಂಬೈ ಸಂಚಾರ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ತಮ್ಮ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ ರದ್ದುಗೊಳಿಸಬೇಕು ಹಾಗೂ  ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಬೇಕು  ಎಂದು ಕೋರಿ ಕೇಜ್ರಿವಾಲ್  ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಸ್ಥಳೀಯ ನ್ಯಾಯಾಲಯದಲ್ಲಿ ಹಾಜರಾಗಿ ಮನವಿ ಸಲ್ಲಿಸುವಂತೆ ಕೇಜ್ರಿವಾಲ್‌ ಅವರಿಗೆ ಹೈಕೋರ್ಟ್‌ ಸೂಚನೆ ನೀಡಿತ್ತು.

ಕ್ರಿಮಿನಲ್‌ ಅರ್ಜಿ ವಜಾ (ನವದೆಹಲಿ ವರದಿ): ಮತ್ತೊಂದೆಡೆ,  ಕಳೆದ ವಿಧಾನಸಭೆ ಚುನಾವಣೆ ವೇಳೆ ಅರವಿಂದ ಕೇಜ್ರಿವಾಲ್‌ ಅವರು ಮತದಾರರಿಗೆ ಹಣದ ಆಮಿಷ ಒಡ್ಡಿರುವ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ಈ ಬಗೆಗಿನ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಬುಧವಾರ ಅರ್ಜಿ ವಿಚಾರಣೆ ನಡೆಸಿದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಬ್ರು ಭಾನ್‌ ಅವರು, ಕೇಜ್ರಿವಾಲ್‌ ಅವರು ನೇರವಾಗಿ ಮತದಾರರಿಗೆ ಹಣದ ಆಮಿಷ ಒಡ್ಡಿಲ್ಲ ಮತ್ತು ಅಪರಾಧ ಎಸಗಿಲ್ಲ. ಚುನಾವಣೆಗಾಗಿ ಬೇರೆ ಪಕ್ಷಗಳು ಹಣ ನೀಡಿದರೆ ಅದನ್ನು ಪಡೆದು, ಮತವನ್ನು ಎಎಪಿಗೆ ಚಲಾಯಿಸಿ ಎಂದಿದ್ದರಷ್ಟೇ ಎಂದು  ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಬ್ರು ಭಾನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಸೂಕ್ತ ಸಾಕ್ಷ್ಯಧಾರಗಳ ಕೊರತೆ ಇರುವುದರಿಂದ ಅರ್ಜಿಯನ್ನು ವಜಾಗೊಳಿಸಲಾಗಿದೆ ನ್ಯಾಯಾಧೀಶರು ಹೇಳಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನೀಡುವ ಹಣವನ್ನು ಪಡೆದುಕೊಳ್ಳಿ. ಆದರೆ ಮತವನ್ನು ಆಮ್‌ ಆದ್ಮಿ ಪಕ್ಷಕ್ಕೆ (ಎಎಪಿ) ಚಲಾಯಿಸಿ ಎನ್ನುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ದೂರಿ ಇಕ್ರಾಂತ್‌ ಶರ್ಮಾ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT