ADVERTISEMENT

ಕೂಡುಂಕುಳಂ ಪ್ರತಿಭಟನೆ: ಅಮೆರಿಕ ಎನ್‌ಜಿಒ ಕೈವಾಡ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ನವದೆಹಲಿ: ತಮಿಳುನಾಡಿನ ಕೂಡುಂಕುಳಂ ಅಣುಸ್ಥಾವರದ ವಿರುದ್ಧ ನಡೆಯುತ್ತಿರುವ ಚಳವಳಿ ಹಿಂದೆ ಅಮೆರಿಕ ಮೂಲದ ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳ ಕೈವಾಡವಿದೆ ಎಂದು ಪ್ರಧಾನಿ ಡಾ. ಮನಮೋಹನ್‌ಸಿಂಗ್ ಆರೋಪಿಸಿದ್ದಾರೆ. ಪ್ರಧಾನಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದೊಂದು ನಿರಾಧಾರ ಆರೋಪ ಎಂದು ಅಣುಸ್ಥಾವರ ವಿರೋಧಿ ಚಳವಳಿಗಾರರು ಹೇಳಿದ್ದಾರೆ.

ಪ್ರಧಾನಿ ಇಂಗ್ಲಿಷ್ ನಿಯತಕಾಲಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, `ಹೆಚ್ಚುತ್ತಿರುವ ನಮ್ಮ ವಿದ್ಯುತ್ ಬೇಡಿಕೆಯನ್ನು ಅರ್ಥ ಮಾಡಿಕೊಳ್ಳದ ವಿದೇಶಿ ಮೂಲದ ಎನ್‌ಜಿಒಗಳು ಅಣು ಸ್ಥಾವರ ವಿರೋಧಿ ಚಳವಳಿಗೆ ತುಪ್ಪ ಸುರಿಯುತ್ತಿವೆ. ಇದರಿಂದ ಕೂಡುಂಕುಳಂ ಅಣುಸ್ಥಾವರ ಘಟಕ ಸ್ಥಾಪನೆ ಕಷ್ಟವಾಗುತ್ತಿದೆ~ ಎಂದು ಹೇಳಿದ್ದಾರೆ.

ಕುಲಾಂತರಿ ಬೀಜಗಳು ಮತ್ತು ಜೈವಿಕ ತಂತ್ರಜ್ಞಾನ ಬಳಸಿ ಆಹಾರ ಉತ್ಪಾದನೆ ಹೆಚ್ಚಿಸುವುದಕ್ಕೂ ಈ ಎನ್‌ಜಿಒಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮುಂಬರುವ ದಿನಗಳಲ್ಲಿ ಜೈವಿಕ ತಂತ್ರಜ್ಞಾನ ಬಳಕೆಗೆ ವ್ಯಾಪಕ ಅವಕಾಶಗಳಿವೆ. ಆದರೆ, ನಮ್ಮ ಮುಂದಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುವ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಸಂಘಟನೆಗಳು ವಿರೋಧ ಮಾಡುತ್ತಿವೆ ಎಂದು ಪ್ರಧಾನಿ ವಿಷಾದಿಸಿದ್ದಾರೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಷ್ಯಾ ಸಹಕಾರದೊಂದಿಗೆ  ಸಾವಿರ ಮೆ.ವಾ. ಸಾಮರ್ಥ್ಯದ ಎರಡು ಅಣು ವಿದ್ಯುತ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಆದರೆ, ಸ್ಥಳೀಯರ ವಿರೋಧದಿಂದಾಗಿ ನಿರ್ಮಾಣ ಸ್ಥಗಿತಗೊಂಡಿದೆ. ಪ್ರಧಾನಿ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಈ ಸಂಬಂಧದ ವಾಸ್ತಾವಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ `ಅಮೆರಿಕ ಮತ್ತು ಸ್ಕ್ಯಾಂಡಿನೇವಿಯಾ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒಗಳು ಭಾರತದಲ್ಲಿ ಕೆಲಸ ಮಾಡುತ್ತಿರುವ ಎನ್‌ಜಿಒಗಳಿಗೆ ಹಣ ಕೊಟ್ಟು ಚಳವಳಿಗೆ ಪ್ರಚೋದನೆ ನೀಡುತ್ತಿವೆ. ಈ ಅಂಶ ಗೃಹ ಇಲಾಖೆ ತನಿಖೆಯಿಂದ ಬೆಳಕಿಗೆ ಬಂದಿದೆ~ ಎಂದು ಆರೋಪಿಸಿದ್ದಾರೆ.

`ಗೃಹ ಸಚಿವಾಲಯ ಈ ಎನ್‌ಜಿಒಗಳ ಪರವಾನಗಿ ರದ್ದು ಮಾಡಿದೆ. ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಲು ಚಿಂತಿಸಲಾಗುತ್ತಿದೆ. ಅಣುಸ್ಥಾವರದ ಬಳಿ ಜನ ಮೂರು ತಿಂಗಳಿಂದ ಚಳವಳಿ ನಡೆಸುತ್ತಿದ್ದಾರೆ. ವಿವಿಧ ಹಳ್ಳಿಗಳಿಂದ ಟ್ರಕ್‌ಗಳಲ್ಲಿ ಜನರನ್ನು ಕರೆತರಲಾಗುತ್ತಿದೆ~ ಎಂದು ನಾರಾಯಣಸ್ವಾಮಿ ದೂರಿದ್ದಾರೆ.

`ಪ್ರಧಾನಿ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಜನರಿಗೆ ಸತ್ಯವೇನೆಂದು ತಿಳಿಸಲು ಎಲ್ಲ ಅಂಶಗಳನ್ನು ಬಹಿರಂಗ ಪಡಿಸಬೇಕು~ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಪ್ರಧಾನಿ ಹೇಳಿಕೆಗೆ ಬೆಂಬಲವಾಗಿ ನಿಂತಿದೆ. ಮನಮೋಹನ್‌ಸಿಂಗ್ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ಪಕ್ಷದ ವಕ್ತಾರ ರಶೀದ್ ಅಲ್ವಿ ಪತ್ರಕರ್ತರಿಗೆ ತಿಳಿಸಿದ್ದಾರೆ. ಕೂಡುಂಕುಳಂ ಚಳವಳಿಗೆ ಕುಮ್ಮಕ್ಕು ನೀಡುತ್ತಿರುವ ವಿದೇಶಿ ಎನ್‌ಜಿಒಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಣುಸ್ಥಾವರದ ಬಗ್ಗೆ ಸ್ಥಳೀಯರು ಹೊಂದಿರುವ ಕಳವಳವನ್ನು ನಿವಾರಣೆ ಮಾಡಬೇಕು ಎಂದು ಸಿಪಿಐ ಮುಖಂಡ ಡಿ. ರಾಜಾ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.