ADVERTISEMENT

ಕೂದಲೆಳೆ ಅಂತರದಲ್ಲಿ ತಪ್ಪಿದ ವಿದ್ಯುತ್ ನಿಲುಗಡೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ನವದೆಹಲಿ/ಲಖನೌ (ಪಿಟಿಐ, ಐಎಎನ್‌ಎಸ್): ಇದುವರೆಗೆ ಕಂಡರಿಯದಂಥ ತೀವ್ರ ಸ್ವರೂಪದ ವಿದ್ಯುತ್ ಸ್ಥಗಿತದಿಂದ ನಲುಗಿದ್ದ ಉತ್ತರ ಭಾರತ ಗುರುವಾರ ಅದೃಷ್ಟವಶಾತ್ ಮತ್ತೊಮ್ಮೆ ತೀಕ್ಷ್ಣ ಸ್ವರೂಪದ ಸಂಭಾವ್ಯ ಪರಿಣಾಮದಿಂದ ಕೂದಲೆಯ ಅಂತರದಲ್ಲಿ ಪಾರಾಗಿದೆ.

ಉತ್ತರ ಗ್ರಿಡ್ ವ್ಯಾಪ್ತಿಯ ಗ್ವಾಲಿಯರ್ ಮತ್ತು ಆಗ್ರಾ ನಡುವಿನ 400 ಕಿಲೋ ವಾಟ್ ಸಾಮರ್ಥ್ಯದ ಮಾರ್ಗಗಳು ಅತ್ಯಧಿಕ ಪ್ರಮಾಣದ ವಿದ್ಯುತ್ ಒತ್ತಡದಿಂದಾಗಿ (ಓವರ್‌ಲೋಡ್) ಸ್ಥಗಿತಗೊಳ್ಳುವ ಆತಂಕದ ಸ್ಥಿತಿ ಬುಧವಾರ ಸಂಜೆ ನಿರ್ಮಾಣವಾಗಿತ್ತು. ಆದರೆ, ಸಿಬ್ಬಂದಿಯ ಸಮಯ ಪ್ರಜ್ಞೆಯಿಂದಾಗಿ ಸಂಭಾವ್ಯ ಅವಘಡ ನಡೆಯಲಿಲ್ಲ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ.

ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಮಾಣದ ವಿದ್ಯುತ್ ಪ್ರವಹಿಸುತ್ತಿದ್ದನ್ನು ಗಮನಿಸಿದ ಸಿಬ್ಬಂದಿ ತಕ್ಷಣ ಅನೇಕ ಕಡೆಗಳಲ್ಲಿ ವಿದ್ಯುತ್ ಸರಬರಾಜು ಮಾರ್ಗಗಳನ್ನು ಕಡಿತಗೊಳಿಸುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ಉತ್ತರ ಪ್ರದೇಶ ಇಂಧನ ನಿಗಮದ ಮೂಲಗಳು ದೃಢಪಡಿಸಿವೆ.
 ರಾಜಧಾನಿ ದೆಹಲಿ ಸೇರಿದಂತೆ ಉತ್ತರದ ಶೇ 70 ರಷ್ಟು ಪ್ರದೇಶಗಳಿಗೆ ಮಾತ್ರ ಮರಳಿ ವಿದ್ಯುತ್ ಸರಬರಾಜು ಆಗಿದ್ದು ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಸಂಪರ್ಕ ಒದಗಿಸಲು ಇನ್ನೂ ಪ್ರಯತ್ನಗಳು ನಡೆಯುತ್ತಿವೆ.

ಆ ಮೊದಲೇ ಇಂಥ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಶುಕ್ರವಾರದ ವೇಳೆಗೆ ಉತ್ತರ ಭಾರತದ ಎಲ್ಲ ಪ್ರಮುಖ ಕೈಗಾರಿಕಾ ಪ್ರದೇಶಗಳಿಗೂ ಮರಳಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು ಅದನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಒಪ್ಪಿಕೊಂಡಿರುವ ಅಧಿಕಾರಿಗಳು ಎಲ್ಲ ಸಿಬ್ಬಂದಿಯನ್ನು ಜಾಗೃತವಾಗಿರುವಂತೆ ಕಟ್ಟೆಚ್ಚರ ನೀಡಿದ್ದಾರೆ.

ಅಗತ್ಯಕ್ಕಿಂತ ಹೆಚ್ಚು ಬಳಕೆ ಗ್ರಿಡ್ ವೈಫಲ್ಯಕ್ಕೆ ಕಾರಣ

ನವದೆಹಲಿ: ಗ್ರಿಡ್‌ಗಳ ವೈಫಲ್ಯಕ್ಕೆ ಖಚಿತ ಕಾರಣ ಇನ್ನೂ ದೃಢಪಟ್ಟಿಲ್ಲವಾದರೂ ಕೆಲವು ರಾಜ್ಯಗಳು ಅಗತ್ಯಕ್ಕಿಂತ ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿಕೊಳ್ಳುತ್ತಿರುವುದೇ ಸಮಸ್ಯೆಗೆ ಪ್ರಮುಖ ಕಾರಣ ಎಂಬ ಸತ್ಯ ಆಂತರಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.

ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳು ಅಗತ್ಯಕ್ಕಿಂತ ಹೆಚ್ಚು ವಿದ್ಯುತ್ ಬಳಸುತ್ತಿರುವುದಿಂದ ಜುಲೈ 30ರಂದು ಸಂಭವಿಸಿದ ತೀವ್ರ ಸ್ವರೂಪದ ವಿದ್ಯುತ್ ಸ್ಥಗಿತಕ್ಕೆ ಕಾರಣ. ಈ ಘಟನೆಗೂ ಮುನ್ನ ವಿದ್ಯುತ್ ಸರಬರಾಜು ಮಾರ್ಗಗಳು ಅಧಿಕ ವಿದ್ಯುತ್ ಒತ್ತಡದಿಂದ ನಲುಗಿದ್ದವು ಎಂದು ತನಿಖೆ ನಡೆಸಿದ ಪೊಸೊಕೊ ತಿಳಿಸಿದೆ.

ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಉತ್ತರ ಪ್ರದೇಶದ ಆಗ್ರಾ ನಡುವಿನ ಒಂದು ಮಾರ್ಗ ದುರಸ್ತಿಯಲ್ಲಿರುವ ಕಾರಣ ಲಭ್ಯವಿದ್ದ ಒಂದೇ ಮಾರ್ಗದಲ್ಲಿ ಅದರ ಧಾರಣಾ ಸಾಮರ್ಥ್ಯಕ್ಕೂ ಮೀರಿ ಸಾವಿರ ಮೆಗಾವಾಟ್‌ಗೂ ಹೆಚ್ಚು ವಿದ್ಯುತ್ ಸರಬರಾಜು ಆಗಿದೆ. ನಿಗದಿತ ಸಾಮರ್ಥ್ಯಕ್ಕೂ ಮೀರಿದ ವಿದ್ಯುತ್ ಪ್ರವಹಿಸಿದ ಒತ್ತಡದಿಂದಾಗಿ ಸರಬರಾಜು ಮಾರ್ಗಗಳು ಸ್ಥಗಿತಗೊಂಡಿವೆ ಎಂದು ಪೊಸೊಕೊ ವರದಿ ಹೇಳಿದೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.