ADVERTISEMENT

ಕೃಷಿಗೆ ನೀರಾವರಿಯೇ ಜೀವಾಳ: ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2016, 19:30 IST
Last Updated 18 ಜನವರಿ 2016, 19:30 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಿಂ ಯುವತಿಯರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಸಿಎಂ ಪವನ್‌ಕುಮಾರ್‌ ಚಾಮ್ಲಿಂಗ್‌ ಚಿತ್ರದಲ್ಲಿದ್ದಾರೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಕ್ಕಿಂ ಯುವತಿಯರು ಸಾಂಪ್ರದಾಯಿಕ ಸ್ವಾಗತ ನೀಡಿದರು. ಸಿಎಂ ಪವನ್‌ಕುಮಾರ್‌ ಚಾಮ್ಲಿಂಗ್‌ ಚಿತ್ರದಲ್ಲಿದ್ದಾರೆ   

ಗ್ಯಾಂಗ್‌ಟಕ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿ ಕೆರೆ ಕಟ್ಟೆಗಳ ನಿರ್ಮಾಣ ಮತ್ತು ಜಲಮೂಲಗಳ ಜೀರ್ಣೋದ್ಧಾರದ ಮೂಲಕ ಎಲ್ಲಾ ಕೃಷಿ ಜಮೀನುಗಳಿಗೂ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.

ಸೋಮವಾರ ಇಲ್ಲಿ ಮುಕ್ತಾಯವಾದ ಸುಸ್ಥಿರ ಬೇಸಾಯ ಮತ್ತು ರೈತರ ಕಲ್ಯಾಣ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರತಿ ರೈತನಿಗೂ ನೀರಾವರಿ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ವಿಚಾರ ಸಂಕಿರಣದಲ್ಲಿ ಸೂಚಿಸಿರುವ ಅಂಶಗಳನ್ನು ಬಜೆಟ್ ರೂಪಿಸುವಲ್ಲಿ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಎಪಿಎಂಸಿ ಸುಧಾರಣೆಯಿಂದ ರೈತರಿಗೆ ಹೆಚ್ಚಿನ ಬೆಲೆ: ‘ಕರ್ನಾಟಕದ ಎಪಿಎಂಸಿ ವ್ಯವಸ್ಥೆಯಲ್ಲಿ ಸುಧಾರಣೆ ತಂದ ನಂತರ ರೈತರಿಗೆ ಹೆಚ್ಚಿನ ಲಾಭ ದೊರೆಯುತ್ತಿದೆ.  ಒಂದೆಡೆಯೇ ಎಲ್ಲಾ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಕಾರಣ ರೈತರಿಗೆ ಹೆಸರುಕಾಳು, ಕಡಲೆಕಾಯಿ ಮತ್ತು ಕೊಬ್ಬರಿ ಮಾರಾಟದಿಂದ ದೊರಕುತ್ತಿರುವ ಆದಾಯದಲ್ಲಿ ಶೇ 40ರಷ್ಟು ಹೆಚ್ಚಳವಾಗಿದೆ’ ಎಂದು ಕರ್ನಾಟಕದ ಕೃಷಿ ಸಚಿವ ಕೃಷ್ಣಬೈರೇಗೌಡ ಹೇಳಿದರು.

ಸಿಕ್ಕಿಂ ಸಾವಯವ ರಾಜ್ಯ: ಸಿಕ್ಕಿಂ ದೇಶದ ಮೊದಲ ಸಾವಯವ ರಾಜ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮೇಳನದಲ್ಲಿ ಘೋಷಿಸಿದರು. ಸಾವಯವ ರಾಜ್ಯವಾಗುವ ನಿಟ್ಟಿನಲ್ಲಿ ಸಿಕ್ಕಿಂ ಕೈಗೊಂಡ ಕ್ರಮಗಳನ್ನು ಉಳಿದ ರಾಜ್ಯಗಳೂ ಅನುಸರಿಸಬೇಕು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.