ADVERTISEMENT

ಕೃಷಿ ಕ್ರಾಂತಿಯ ತಾಣದಲ್ಲಿ ಕೋಮು ಬೆಂಕಿ

ರಾಜ್ಯ ವಾರ್ತಾಪತ್ರ ಉತ್ತರ ಪ್ರದೇಶ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಉತ್ತರಪ್ರದೇಶ: ದಶಕಗಳಿಂದ ಉತ್ತರ ಪ್ರದೇಶದ ಮುಜಾಫರ್ ನಗರ ಜಿಲ್ಲೆಯ ಜಾಟರು ಮತ್ತು  ಮುಸ್ಲಿಮರ ನಡುವೆ ಪರಸ್ಪರ ಸ್ನೇಹ–ಸೌಹಾರ್ದ ಮನೆ ಮಾಡಿತ್ತು. ಎರಡೂ ಕೋಮಿನವರೂ ಈ ಸ್ನೇಹ–ಸೌಹಾರ್ದ ಸಂಬಂಧವನ್ನು ಬಲು ಪ್ರೀತಿಯಿಂದಲೇ  ಜತನ ಮಾಡಿಕೊಂಡಿದ್ದರು. ಆದರೆ, ಮೊನ್ನೆ ಇದ್ದಕ್ಕಿದ್ದಂತೆ ಶಾಲಾ ಬಾಲಕಿಯೊಬ್ಬಳನ್ನು ಚುಡಾಯಿಸಿ, ಮೂವರನ್ನು ಕೊಲ್ಲುವ ಮೂಲಕ ಈ ಸ್ನೇಹ–ಸೌಹಾರ್ದದ ಸಂಬಂಧಕ್ಕೆ ಕೋಮುದಳ್ಳುರಿಯ ಬಿಸಿ ತಾಗಿಬಿಟ್ಟಿತು. ಇಷ್ಟು ದಿನ ಬಂಧು–ಬಾಂಧವರಂತಿದ್ದ ಜಾಟರು–ಮುಸ್ಲಿಮರು ಈಗ ಕೋಮುದ್ವೇಷದ ದಾಳಗಳಾಗಿ ಬದಲಾಗಿ ಬಿಟ್ಟಿದ್ದಾರೆ.

ಕಬ್ಬಿನ ಹೊಲಗಳು, ಅಪಾರ ಸಂಖ್ಯೆಯ ಉಕ್ಕು ಮತ್ತು ಕಾಗದ ಕಾರ್ಖಾನೆಗಳಿಗೆ ಪ್ರಸಿದ್ಧಿಯಾಗಿದ್ದ ಮುಜಾಫರ್ ನಗರಕ್ಕೆ ಮೊದಲ ಬಾರಿಗೆ ಸೇನೆ ಬಂದಿದ್ದು 1992ರಲ್ಲಿ. ಅದೂ ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಉಂಟಾದ ಕೋಮುಘರ್ಷಣೆಯ ಕಾರಣಕ್ಕಾಗಿ. 92ರ ಘಟನೆಯ ನಂತರ ಮತ್ತೆ ಕೋಮುಸಾಮರಸ್ಯ ಸಾಧಿಸಿದ್ದ ಈ ಜಿಲ್ಲೆಯಲ್ಲೀಗ ಮತ್ತೆ ಸೇನಾ ವಾಹನಗಳ, ಸೈನಿಕರ ಬೂಟಿನ ಸದ್ದು ಕೇಳಿಬಂದಿದೆ.

-ಮುಜಾಫರ್‌ನಗರ ಈ ಹಿಂದೆ ಹೀಗಿರಲಿಲ್ಲ ಎನ್ನುತ್ತಾರೆ ಅಲ್ಲಿನ ಹಿರಿಯರು. ಭಾರತ–ಪಾಕಿಸ್ತಾನದ ವಿಭಜನೆಯ ಸಂದರ್ಭದಲ್ಲೂ ಇಲ್ಲಿ ಯಾವುದೇ ದೊಂಬಿ ಆಗಿರಲಿಲ್ಲ ಎಂದು ಅಲ್ಲಿನ ಹಳ್ಳಿಯ ಹಿರಿಯರು ನೆನಪಿನ ಬುತ್ತಿ ಬಿಚ್ಚಿಡುತ್ತಾರೆ. ಜಾಟರು–ಮುಸ್ಲಿಮರು ಯಾವತ್ತೂ ಶಾಂತಿಯಿಂದಲೇ  ಇಲ್ಲಿ ಬಾಳ್ವೆ ಮಾಡಿದ್ದಾರೆ. ಈ ಕೋಮು ಸೌಹಾರ್ದ– ಶಾಂತಿ ಮಾಜಿ ಪ್ರಧಾನಿ ಚರಣ್‌ ಸಿಂಗ್‌ ಅವರ ಸಾವಿನೊಂದಿಗೇ ಹೊರಟು ಹೋಯಿತು ಎನ್ನುವ ಮಾತೂ ಇಲ್ಲಿ ಕೇಳಿಬರುತ್ತದೆ.

ಈ ಮಾತು ನಿಜ ಎನಿಸುತ್ತದೆ. ಏಕೆಂದರೆ, ಜಾಟರು ಮತ್ತು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗವನ್ನು ಚರಣ್‌ ಸಿಂಗ್‌ ಜಾಣತನದಿಂದಲೇ ‘ಮತ ಬ್ಯಾಂಕ್’ ಆಗಿ ಪರಿವರ್ತಿಸಿ­ಕೊಂಡಿದ್ದರು. ಈ ಮತಬ್ಯಾಂಕ್‌ ಅವರಿಗೆ ರಾಜಕೀಯ ಗದ್ದುಗೆ ಏರಲು ಏಣಿಯಾಗಿತ್ತು.  ಜಾಟರು–ಮುಸ್ಲಿಮ­ರನ್ನು ರಾಜಕೀಯ­ವಾಗಿ ಸಂಘಟಿತ ನೆಲೆಯಲ್ಲಿ ಬಂಧಿಸಿಟ್ಟಿದ್ದರು ಚರಣ್‌­ಸಿಂಗ್‌.

1987ರಲ್ಲಿ ಚರಣ್‌ ಸಿಂಗ್‌ ಅವರ ಸಾವಿನೊಂದಿಗೇ ಜಾಟ್‌–ಮುಸ್ಲಿಮರ ಸಂಘಟನೆಯೂ ನೆಲೆ ಕಳೆದುಕೊಂಡಿತ್ತು. ಇತ್ತೀಚೆಗೆ ನಡೆದ ಕೋಮುದಳ್ಳುರಿಯ ಹಿಂದೆ ಜಾಟ್–ಮುಸ್ಲಿಮರ ನಡುವಿನ ಬಾಂಧವ್ಯ ಕದಡುವ ರಾಜಕೀಯ ಹುನ್ನಾರ ಅಡಗಿದೆ ಎಂಬುದು ಬಹುತೇಕರ ಆರೋಪ.

41.43 ಲಕ್ಷ ಜನರಿರುವ ಈ  ಜಿಲ್ಲೆಯಲ್ಲಿ ಒಂದೇ ಕಾರಣಕ್ಕಾಗಿ ಮೂವರು ಪ್ರಾಣ ಕಳೆದು ಕೊಂಡಿರುವುದು ನಿಜಕ್ಕೂ ಆತಂಕಕಾರಿ ವಿಷಯ. ಅಲ್ಲದೇ, ಇದು ನಿರ್ಲಕ್ಷಿಸಬೇಕಾದ ಸಂಗತಿಯಂತೂ ಅಲ್ಲ.

ತಮ್ಮ ಸಮುದಾಯಕ್ಕೆ ಸೇರಿದ್ದ ಇಬ್ಬರು ಯುವಕರನ್ನು ಕೊಂದಿದ್ದ ಮುಸ್ಲಿಮರನ್ನು ಜಾಟ್‌ ಸಮುದಾಯದವರು ಸಹಜವಾಗಿಯೇ ಟೀಕಿಸಿದ್ದಾರೆ. ಈ ಕುರಿತು ಅಲ್ಲಿನ ‘ಮಹಾಪಂಚಾಯತ್’ನಲ್ಲಿ ಚರ್ಚೆಗೂ ಆಹ್ವಾನಿಸಿದ್ದಾರೆ. ಆದರೆ, ಈ ಅವಮಾನ ತಾಳಲಾರದ ಮುಸ್ಲಿಮರು ‘ಮುಯ್ಯಿಗೆ ಮುಯ್ಯಿ’ ಎಂಬಂತೆ ಜಾಟರ ಮೇಲೆ ಹಲ್ಲೆ ನಡೆಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಅಲ್ಲಲ್ಲಿ ಸಣ್ಣಗೆ ಹೊಗೆಯಾಡುತ್ತಿದ್ದ ಕೋಮುದ್ವೇಷವು ಶಾಲಾ ಬಾಲಕಿಯನ್ನು ಚುಡಾಯಿಸುವ  ಮೂಲಕ, ಅದನ್ನು ಪಶ್ನಿಸಿದ ಬಾಲಕಿಯರ ಸಹೋದರರ ಕೊಲೆಯ ಮೂಲಕ ಕೋಮುದಳ್ಳುರಿಯ ಸ್ವರೂಪ ಪಡೆದಿದೆ.

ಇದುವರೆಗೂ ಸಕ್ಕರೆಯ ತಾಣ­ವಾಗಿದ್ದ, ಕೃಷಿ ಕ್ರಾಂತಿಗೆ ಹೆಸರಾಗಿದ್ದ ಮುಜಾಫರ್‌ ನಗರದಲ್ಲಿ ಸಾಮಾಜಿಕ– ರಾಜಕೀಯ ಭಿನ್ನತೆಗಳಿದ್ದರೂ ಶಾಂತಿ ಕದಡುವ ಪ್ರಸಂಗಗಳು ಎದುರಾಗಿರಲಿಲ್ಲ. ಆದರೆ, ಇತ್ತೀಚೆಗೆ ನಡೆದ ಘಟನೆಯ ಮೂಲಕ ಜಾಟರು–ಮುಸ್ಲಿಮರು ಪರಸ್ಪರರ ಒಬ್ಬರ ಮೇಲೆ ಮತ್ತೊಬ್ಬರು ದೋಷಾರೋಪ ಹೊರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮುಜಾಫರ್ ನಗರದಿಂದ ಕೇವಲ 20ಕಿ.ಮೀ. ದೂರವಿರುವ ಶಾಹಪುರಕ್ಕೆ ಭೇಟಿ ನೀಡಿದಾಗ ಕೋಮುದಳ್ಳುರಿಯ ಭಯಕ್ಕೆ ಸಿಲುಕಿ ನಲುಗುತ್ತಿರುವವರ ಚಿತ್ರಣ ಅನಾವರಣಗೊಳ್ಳುತ್ತದೆ. ಸುಮಾರು ಒಂದು ಸಾವಿರ ಮುಸ್ಲಿಂ ಕುಟುಂಬಗಳಿರುವ ಶಹಾಪುರದ  ‘ಇಸ್ಲಾಮಾಬಾದ್‌ ಬಸ್ತಿ’ ಎಂಬಲ್ಲಿ ಅಲ್ಲಿನ ಮುಸ್ಲಿಂ ಮಹಿಳೆಯರು ಬಟಾ­ಬಯಲಿನಲ್ಲೇ ಅಡುಗೆಗೆ ತೊಡಗಿರುವ ದೃಶ್ಯ ಕಂಡುಬಂತು. ಏಕೆ ಹೀಗೆ ಎಂದು ಪ್ರಶ್ನಿಸಿದರೆ, ‘ಇನ್ನು ಹತ್ತು ದಿನಗಳ ಕಾಲ ನಾವು ಕಾಯುತ್ತೇವೆ. ಆಮೇಲೆ ಎಲ್ಲಿಗೆ ಹೋಗಬೇಕು ಎಂದು ನಿರ್ಧರಿಸುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಒಂದು ಕಾಲಕ್ಕೆ ಕಷ್ಟದಲ್ಲಿದ್ದ ಮುಸ್ಲಿಮರಿಗೆ ಸಹಾಯ ಮಾಡಿದ್ದ ಜಾಟರ ಬಳಿಗೆ ಹಿಂದಿರುಗಲು ಮುಸ್ಲಿಮರು ಭಯಪಡುವಂತಾಗಿದೆ. ಆದರೆ, ಇವೆಲ್ಲದರ ನಡುವೆಯೂ ಜಾಟರು ಮುಸ್ಲಿಮರ ರಕ್ಷಣೆಗೆ ತೊಡಗಿರುವುದು ಸಮಾಧಾನದ ಸಂಗತಿ. ಗಲಭೆಯಲ್ಲಿ ನೊಂದಿರುವ ಮುಸ್ಲಿಮರಿಗೆ ಕೆಲ ಜಾಟರು ತಮ್ಮ ಮನೆಯಲ್ಲೇ ಊಟ, ವಸತಿ ವ್ಯವಸ್ಥೆ ಕಲ್ಪಿಸಿ ಸುರಕ್ಷತೆಯನ್ನೂ ಒದಗಿಸಿದ್ದಾರೆ. ಮತ್ತೆ ಕೆಲವರು ಅಲ್ಪಸಂಖ್ಯಾತರಾಗಿರುವ ಮುಸ್ಲಿಮರನ್ನು ಬೇರೆ ಕಡೆ ಸಾಗಲು ವ್ಯವಸ್ಥೆಯನ್ನೂ ಕಲ್ಪಿಸಿದ್ದಾರೆ. 

ಆದರೆ, ಹೀಗೆ ಹೆದರಿ ಹೋಗುವ ಮುಸ್ಲಿಮರು ಮತ್ತೆ ವಾಪಸ್‌ ಬಂದಾಗ ಅವರಿಗೆ ಅವರ ಆಸ್ತಿ, ಹಿಂದಿನ ನೆಮ್ಮದಿಯ ಸಿಗುವುದೇ ಎಂಬುದು ಮುಖ್ಯ ಪ್ರಶ್ನೆ. ಏಕೆಂದರೆ ಬಹುಸಂಖ್ಯಾತ­ರಾಗಿರುವ ಜಾಟರು, ಹಳ್ಳಿಯೊಳಗೆ ಕಾಲಿಟ್ಟ ಕ್ಷಣವೇ ತಮ್ಮನ್ನು ಕೊಂದು­ಬಿಡುತ್ತಾರೆಂಬ ಭಯ ಮುಸ್ಲಿಮರ ಮನಸ್ಸನ್ನು ಆವರಿಸಿದೆ.

ಸ್ಥಳೀಯ ಆಡಳಿತ ಮತ್ತು ರಾಜಕಾರ­ಣಿಗಳೇ ಈ ಕೋಮುದಳ್ಳುರಿಗೆ ಕಾರಣ. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ರಾಜಕಾರಣಿ­ಗಳು ಜಾಟರು–ಮುಸ್ಲಿಮರೊಂದಿಗೆ ಆಟವಾಡು­ತ್ತಿದ್ದಾರೆ. ಹೀಗಾಗಿ, ಸಮಾಜವಾದಿ ಪಕ್ಷ ನೇತೃತ್ವದ ಸರ್ಕಾರವೇ ಇದಕ್ಕೆ ನೇರ ಹೊಣೆ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಸಣ್ಣ ಕಾರಣಕ್ಕಾಗಿ ಮುಜಾಫರ್ ನಗರದಲ್ಲಿ ಹೊತ್ತಿಕೊಂಡ ಕೋಮು ದಳ್ಳುರಿಯ ರಾಜಕೀಯ ಧ್ರುವೀಕರಣ ಮುಂಬರುವ 2014ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಇಡೀ ದೇಶವನ್ನೇ  ಆವರಿಸಲಿದೆಯೇ ಎಂಬ ಪ್ರಶ್ನೆಯನ್ನೂ ಮುಜಾಫರ್ ನಗರ ಹುಟ್ಟುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.