ADVERTISEMENT

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್‌ ಖಾನ್‌ ಅರ್ಜಿ ವಿಚಾರಣೆ ಜುಲೈ 17ಕ್ಕೆ ಮುಂದೂಡಿಕೆ

ಏಜೆನ್ಸೀಸ್
Published 7 ಮೇ 2018, 10:26 IST
Last Updated 7 ಮೇ 2018, 10:26 IST
ಬಾಲಿವುಡ್ ನಟ ಸಲ್ಮಾನ್ ಖಾನ್
ಬಾಲಿವುಡ್ ನಟ ಸಲ್ಮಾನ್ ಖಾನ್   

ಜೋಧಪುರ: ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿರುವ 5 ವರ್ಷಗಳ ಜೈಲುಶಿಕ್ಷೆ ವಜಾ ಮಾಡುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಜುಲೈ 17ಕ್ಕೆ ಮುಂದೂಡಿದೆ.

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಚಂದ್ರ ಕುಮಾರ್‌ ಸೊಂಗರ ಪ್ರಕರಣವನ್ನು ಸೋಮವಾರ ಕೈಗೆತ್ತಿಕೊಂಡಾಗ, ಸಲ್ಮಾನ್‌ ಪರ ವಕೀಲರು ಸಮಯಾವಕಾಶ ಕೋರಿ ಮನವಿ ಸಲ್ಲಿಸಿದರು. ಅದನ್ನು ಸ್ವೀಕರಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮುಂದೂಡಿದರು.

ನ್ಯಾಯಾಧೀಶರಾದ ದೇವ್‌ ಕುಮಾರ್‌ ಖತ್ರಿ ಅವರು ಈ ಪ್ರಕರಣದಲ್ಲಿ ಸಲ್ಮಾನ್‌ ದೋಷಿ ಎಂದು ಘೋಷಿಸಿ ಏಪ್ರಿಲ್‌ 5ರಂದು ಐದು ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿದ್ದರು. ಸಲ್ಮಾನ್‌ ಜಾಮೀನು ಪಡೆದು ಏಪ್ರಿಲ್‌ 7ರಂದು ಜೈಲಿನಿಂದ ಹೊರಬಂದಿದ್ದರು.

ADVERTISEMENT

ಪ್ರಕರಣದಲ್ಲಿ ಸಲ್ಮಾನ್ ಖಾನ್ ಹೊರತುಪಡಿಸಿ ಇತರ ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ. ನಟರಾದ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಮತ್ತು ನೀಲಂ ಅವರನ್ನು ನ್ಯಾಯಾಲಯ ಆರೋಪಮುಕ್ತಗೊಳಿಸಿದೆ.

ಏನಿದು ಪ್ರಕರಣ?:

1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾ ಶೂಟಿಂಗ್ ವೇಳೆ ಜೋಧಪುರ ಸಮೀಪದ ಕಂಕಣಿ ಗ್ರಾಮದಲ್ಲಿ ಸಲ್ಮಾನ್ ಖಾನ್ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ್ದರು. ಈ ಬೇಟೆಗೆ ಪರವಾನಗಿ ಇಲ್ಲದ ಬಂದೂಕು ಬಳಕೆ ಮಾಡಲಾಗಿತ್ತು. ರಕ್ಷಿತಾರಣ್ಯ ಪ್ರದೇಶದಲ್ಲಿ ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್ ಖಾನ್ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 9/51 ಮತ್ತು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.