ADVERTISEMENT

`ಕೆವೈಸಿ' ಸಲ್ಲಿಸದಿದ್ದರೆ ಅನಿಲ ಸಂಪರ್ಕ ರದ್ದು

ಒಂದಕ್ಕಿಂತ ಹೆಚ್ಚು ಎಲ್‌ಪಿಜಿ: ಲೋಕಸಭೆಯಲ್ಲಿ ಸರ್ಕಾರದ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST


ನವದೆಹಲಿ (ಪಿಟಿಐ): `ಒಂದಕ್ಕಿಂತ ಹೆಚ್ಚು ಅಡುಗೆ ಅನಿಲ  (ಎಲ್‌ಪಿಜಿ) ಸಂಪರ್ಕ ಹೊಂದಿರುವವರು ನಿಗದಿತ ದಿನಾಂಕದೊಳಗೆ `ನಿಮ್ಮ ಗ್ರಾಹಕರನ್ನು ತಿಳಿಯಿರಿ' ಅರ್ಜಿ ನಮೂನೆಯನ್ನು (ಕೆವೈಸಿ) ಭರ್ತಿ ಮಾಡಿ ಸಲ್ಲಿಸದಿದ್ದರೆ ಸಬ್ಸಿಡಿ ಎಲ್‌ಪಿಜಿ ಸರಬರಾಜು ರದ್ದು ಮಾಡಲಾಗುತ್ತದೆ' ಎಂದು ಕೇಂದ್ರ ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.

`ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ನೀಡುವ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್ ಸಂಖ್ಯೆಯನ್ನು ಆರಕ್ಕೆ ಸೀಮಿತಗೊಳಿಸಲು ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ನಿರ್ಧರಿಸಿತ್ತು. ಹೆಚ್ಚುವರಿ ಸಿಲಿಂಡರ್‌ಗಳಿಗೆ ಸಬ್ಸಿಡಿ ಅನ್ವಯವಾಗುವುದಿಲ್ಲ' ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವೆ ಪನಬಾಕ ಲಕ್ಷ್ಮೀ ಹೇಳಿದರು.

ದೆಹಲಿಯಲ್ಲಿ ಸಬ್ಸಿಡಿ ಎಲ್‌ಪಿಜಿ ಸಿಲಿಂಡರ್‌ಗೆ 410.50 ರೂಪಾಯಿ. ಹೆಚ್ಚುವರಿಯಾಗಿ ಬೇಕಾದರೆ ಪ್ರತಿ ಸಿಲಿಂಡರ್‌ಗೆ 895.50 ರೂಪಾಯಿ ನೀಡಬೇಕಾಗುತ್ತದೆ. ವಾಣಿಜ್ಯ ಬಳಕೆ ಸಿಲಿಂಡರ್‌ಗೆ (14.2 ಕೆ.ಜಿ) 1,156 ರೂಪಾಯಿ ನಿಗದಿ ಮಾಡಲಾಗಿದೆ.ಒಂದಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ವಿತರಕರಿಗೆ ಕೆವೈಸಿ ಅರ್ಜಿ ಸಲ್ಲಿಸಲು ಡಿ.31ರ ವರಗೆ ಗಡುವು ವಿಸ್ತರಿಸಲಾಗಿದೆ. ಈ ಮೊದಲು ನವೆಂಬರ್ 15ಕ್ಕೆ ಗಡುವು ನಿಗದಿ ಮಾಡಲಾಗಿತ್ತು. ಒಂದಕ್ಕಿಂತ ಹೆಚ್ಚು ಅಥವಾ ಅಕ್ರಮ ಸಂಪರ್ಕವನ್ನು ಪತ್ತೆ ಮಾಡಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವ ಗ್ರಾಹಕರು ಮಾತ್ರ ಕೆವೈಸಿ ಅರ್ಜಿಯನ್ನು ಸಲ್ಲಿಸಬೇಕು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಒಂದೇ ವಿಳಾಸದಲ್ಲಿ, ಬೇರೆ ಹೆಸರಿನಲ್ಲಿ ಸುಮಾರು 2 ಕೋಟಿಗೂ ಹೆಚ್ಚಿನ ಕುಟುಂಬಗಳು ಒಂದಕ್ಕಿಂತ ಹೆಚ್ಚು ಎಲ್‌ಪಿಜಿ ಸಂಪರ್ಕ ಹೊಂದಿವೆ ಎನ್ನುವುದನ್ನು ತೈಲ ಕಂಪೆನಿಗಳು ಪತ್ತೆ ಮಾಡಿವೆ.

`ಒಂದು ಕುಟುಂಬಕ್ಕೆ ಒಂದು ಸಂಪರ್ಕ' ಎನ್ನುವ ನಿಯಮವನ್ನು ತೈಲ ಕಂಪೆನಿಗಳು ಜಾರಿ ಮಾಡುತ್ತಿವೆ. ಹಾಗಾಗಿ ಒಂದಕ್ಕಿಂತ ಹೆಚ್ಚು ಸಂಪರ್ಕ ಹೊಂದಿರುವ ಗ್ರಾಹಕರು ತಾವಾಗಿಯೇ ಮುಂದೆ ಬಂದು ಮಾಹಿತಿ ನೀಡುವಂತೆ ಸೂಚಿಸಲಾಗಿದೆ' ಎಂದೂ ತಿಳಿಸಿದ್ದಾರೆ.
ಕೆವೈಸಿ ಅರ್ಜಿಯಲ್ಲಿ ಗ್ರಾಹಕರು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ಹೆಸರು, ಹುಟ್ಟಿದ ದಿನಾಂಕ, ತಂದೆ, ತಾಯಿ, ಪತ್ನಿಯ ಹೆಸರು ಇತ್ಯಾದಿ ವಿವರಗಳನ್ನು ಬರೆಯಬೇಕು. ವಿಳಾಸದಲ್ಲಿ ಪಿನ್‌ಕೋಡ್ ಕೂಡ ಇರಬೇಕು. ಜತೆಗೆ ಗುರುತಿನ ಪತ್ರವನ್ನೂ ಲಗತ್ತಿಸಬೇಕು.

ಕೆವೈಸಿ ಪ್ರಕ್ರಿಯೆ ಮುಗಿದ ಬಳಿಕ ಹೊಸದಾಗಿ ಸಬ್ಸಿಡಿ ಎಲ್‌ಪಿಜಿ ಸಂಪರ್ಕ ನೀಡಲಾಗುತ್ತದೆ. 2013ರ  ಮಾರ್ಚ್31ರವರೆಗೆ ಎಲ್ಲ ಗ್ರಾಹಕರೂ ತಲಾ 3 ಸಿಲಿಂಡರ್‌ಗಳನ್ನು ಪಡೆಯಬಹುದು. 2013ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ವರ್ಷಾಂತ್ಯದವರೆಗೆ ಗ್ರಾಹಕರಿಗೆ 6 ಸಿಲಿಂಡರ್‌ಗಳನ್ನು ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.