ADVERTISEMENT

ಕೇಂದ್ರದಲ್ಲಿ ಬಿಹಾರ ಅಧಿಕಾರಿಗಳ ಪಾರುಪತ್ಯ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 20:44 IST
Last Updated 1 ಡಿಸೆಂಬರ್ 2012, 20:44 IST

ಪಟ್ನಾ: ಎ.ಪಿ. ಸಿಂಗ್ ಅವರಿಂದ ತೆರವಾದ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾದ ಸಿಬಿಐ ನಿರ್ದೇಶಕರಾಗಿ 1974 ನೇ ತಂಡದ ಐಪಿಎಸ್ ಅಧಿಕಾರಿ ರಂಜಿತ್ ಸಿನ್ಹಾ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ವಿಶೇಷವೆಂದರೆ ನವೆಂಬರ್ 30ರಂದು ಸಿಬಿಐ ನಿರ್ದೇಶಕ ಹುದ್ದೆಯಿಂದ ನಿವೃತ್ತಿ ಹೊಂದಿದ ಎ.ಪಿ. ಸಿಂಗ್ ಮತ್ತು ರಂಜಿತ್ ಸಿನ್ಹಾ ಇಬ್ಬರೂ ಕೂಡ ಬಿಹಾರ ರಾಜ್ಯಕ್ಕೆ ಸೇರಿರುವುದು. ಈ ಮೂಲಕ ಕೇಂದ್ರ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ಬಿಹಾರ ರಾಜ್ಯದ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪಾರಪತ್ಯ ಮುಂದುವರೆದಿದೆ.

2004ರಲ್ಲಿ ಇಂಡೋ ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಡಿಜಿಯಾಗಿ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ಸಿನ್ಹಾ ಅವರ ನಿವೃತ್ತಿ 2013ರ ಮಾರ್ಚ್ 13ಕ್ಕೆ ಇದೆ. ಆದರೂ ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಹೊಣೆ ಹೊತ್ತಿರುವ ಸಿನ್ಹಾ ಸಿಬಿಐ ನಿರ್ದೇಶಕರಾಗಿ ಮುಂದಿನ ಎರಡು ವರ್ಷ ಮುಂದುವರೆಯಲಿದ್ದಾರೆ.
ದಕ್ಷ ಅಧಿಕಾರಿ ಎಂದು ಹೆಸರು ಮಾಡಿರುವ ಈಗಿನ ಗೃಹ ಕಾರ್ಯದರ್ಶಿ ಆರ್. ಕೆ.ಸಿಂಗ್ ಕೂಡ 1975ನೇ ಬಿಹಾರ ತಂಡದ ಐಎಎಸ್ ಅಧಿಕಾರಿಯಾಗಿದ್ದಾರೆ.

ಅತ್ಯಂತ ಸೂಕ್ಷ್ಮ ವಿಷಯವಾದ ಮುಂಬೈ ದಾಳಿಯ ಪ್ರಮುಖ ಆರೋಪಿ ಕಸಾಬ್‌ನನ್ನು ನೇಣಿಗೇರಿಸುವಲ್ಲಿ ಸಿಂಗ್ ಅವರ ಪಾತ್ರ ಪ್ರಮುಖವಾದುದು.
ಇದಕ್ಕೂ ಮುಂಚೆ ರಸ್ತೆ ನಿರ್ಮಾಣ ಆಯುಕ್ತರಾಗಿ ದೆಹಲಿಗೆ ಆರ್.ಕೆ. ಸಿಂಗ್ ಅವರು ನಿಯೋಜನೆಗೊಂಡ ನಂತರ, ಬಿಹಾರ ರಾಜ್ಯದಾದ್ಯಂತ ಹದಗೆಟ್ಟಿದ್ದ ರಸ್ತೆಗಳಿಗೆ ಹೊಸರೂಪ ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.