ADVERTISEMENT

ಕೇಂದ್ರ ಸಚಿವ ಸಿಸ್‌ರಾಂ ಓಲಾ ನಿಧನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ನವದೆಹಲಿ(ಪಿಟಿಐ/ ಐಎಎನ್‌­ಎಸ್‌): ದೀರ್ಘಕಾಲದ ಅನಾರೋ­ಗ್ಯದಿಂದ ಬಳಲುತ್ತಿದ್ದ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ  ಸಿಸ್‌ರಾಂ ಓಲಾ (86) ಗುಡಗಾಂವ್‌ನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ರಾಜಸ್ತಾನ ಮೂಲದವರಾದ ಜಾಟ್‌ ಸಮುದಾಯದ ಓಲಾ ಅವರಿಗೆ ಪತ್ನಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಈ ವರ್ಷದ ಜೂನ್‌ನಲ್ಲಿ ಓಲಾ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

ದೀರ್ಘಕಾಲದ ಅನಾರೋಗ್ಯ­ದಿಂದ ಬಳಲುತ್ತಿದ್ದ  ಓಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕಣ್ಣು ಹಾಗೂ ಕರುಳಿನ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಅವರು ಹೃದ್ರೋಗದಿಂದಲೂ ಬಳಲುತ್ತಿದ್ದರು  ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.

ರಾಜಸ್ತಾನದ ಝುಂಝುನು ಜಿಲ್ಲೆಯ ಸ್ವಗ್ರಾಮದಲ್ಲಿ ಭಾನುವಾರ ಸಂಜೆ ಸರ್ಕಾರಿ ಗೌರವದೊಂದಿಗೆ ಅವರ  ಅಂತ್ಯಸಂಸ್ಕಾರ ನಡೆಯಿತು.

ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ವಿಶೇಷ ಆಸಕ್ತಿ ಹೊಂದಿದ್ದ ಓಲಾ,1952ರಲ್ಲಿ ರಾಜಸ್ತಾನದ ಕುಗ್ರಾಮದಲ್ಲಿ ಕೇವಲ ಮೂವರು
ವಿದ್ಯಾರ್ಥಿನಿಯ­ರೊಂದಿಗೆ ಹೆಣ್ಣು ಮಕ್ಕಳಿಗಾಗಿ ಶಾಲೆ ಆರಂಭಿಸಿದ್ದರು. ಈ ಶಾಲೆ ಇಂದಿರಾ ಗಾಂಧಿ ಬಾಲಿಕಾ ನಿಕೇತನ ಎಂದು ಪ್ರಸಿದ್ಧಿ ಪಡೆದಿದೆ. 1927ರ ಜುಲೈ 30 ರಂದು ಜನಿಸಿದ್ದ ಓಲಾ, ರಾಜಸ್ತಾನ ವಿಧಾನಸಭೆಯನ್ನು 1957ರಿಂದ 1990 ರವರೆಗೆ ಪ್ರತಿನಿಧಿಸಿದ್ದರು. 1980 ರಿಂದ 1990ರವರೆಗೆ ರಾಜಸ್ತಾನದ ಸಚಿವರಾಗಿದ್ದರು. ಲೋಕಸಭೆಗೆ ಐದು ಬಾರಿ ಮತ್ತು ವಿಧಾನಸಭೆಗೆ ಎಂಟು ಬಾರಿ ಆಯ್ಕೆಯಾಗುವಷ್ಟರ ಮಟ್ಟಿಗೆ ಅವರು ಜನಪ್ರಿಯತೆ ಪಡೆದ ನಾಯಕರಾಗಿದ್ದರು. 1968ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.