ADVERTISEMENT

ಕೇಂದ್ರ ಸರ್ಕಾರಕ್ಕೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2012, 19:30 IST
Last Updated 3 ಜನವರಿ 2012, 19:30 IST

ನವದೆಹಲಿ (ಪಿಟಿಐ): ಮಂಗಳೂರಿನಲ್ಲಿ 2010ರ ಮೇ ತಿಂಗಳಿನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟ ಎಲ್ಲ 158 ಜನರ ಕುಟುಂಬ ವರ್ಗಕ್ಕೆ ತಲಾ 75 ಲಕ್ಷ ರೂಪಾಯಿ ಕನಿಷ್ಠ ಪರಿಹಾರ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರ ಹಾಗೂ ಏರ್ ಇಂಡಿಯಾಗೆ ನೋಟಿಸ್ ನೀಡಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸರ್ಕಾರ ಹಾಗೂ ಏರ್ ಇಂಡಿಯಾಗೆ ಸೂಚಿಸಿದ ನ್ಯಾಯಮೂರ್ತಿ ದಲ್‌ವೀರ್ ಭಂಡಾರಿ ಅವರನ್ನು ಒಳಗೊಂಡ ಪೀಠವು, ಏಪ್ರಿಲ್‌ಗೆ ಅಂತಿಮ ವಿಚಾರಣೆಯನ್ನು ನಿಗದಿಪಡಿಸಿತು.
ದುರಂತದಲ್ಲಿ ತಮ್ಮ ಮಗ ರಫೀಕ್‌ನನ್ನು ಕಳೆದುಕೊಂಡ ಅಬ್ದುಸ್ ಸಲಾಂ ಎಂಬುವವರು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿದ ಪೀಠ, ಈ ಆದೇಶ ನೀಡಿತು.

ಸಂತ್ರಸ್ತ ಕುಟುಂಬಕ್ಕೆ ತಲಾ 75 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಏಕ ಸದಸ್ಯ ಪೀಠವು ಏರ್ ಇಂಡಿಯಾಗೆ ನೀಡಿದ್ದ ಆದೇಶವನ್ನು ಕೇರಳ ಹೈಕೋರ್ಟ್ ವಿಭಾಗೀಯ ಪೀಠ ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಸಲಾಂ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಮಾಂಟ್ರಿಯಲ್ ಒಪ್ಪಂದದ ಪ್ರಕಾರ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಸಲಾಂ ಪರ ವಕೀಲ ಹರೀಶ್ ಸಾಳ್ವೆ ವಾದಿಸಿದರು.

ಈ ಒಪ್ಪಂದದ ಅನ್ವಯ, ಅರ್ಜಿದಾರರು ಒಂದು ಲಕ್ಷ ರೂಪಾಯಿ ವಿಶೇಷ ಪರಿಹಾರ  ಮೊತ್ತ ಪಡೆಯಲು ಅರ್ಹರಾಗಿರುತ್ತಾರೆ. ಅಂದರೆ ಇದರ ಪ್ರಕಾರ ಸಂತ್ರಸ್ತ ಕುಟುಂಬಕ್ಕೆ ಕನಿಷ್ಠ 75 ಲಕ್ಷ ರೂಪಾಯಿ ಪರಿಹಾರ ನೀಡಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.