ADVERTISEMENT

ಕೇಂದ್ರ ಸರ್ಕಾರದಿಂದ ತನಿಖೆ?

ಗುಜರಾತ್‌: ಯುವತಿ ಮೇಲೆ ಬೇಹುಗಾರಿಕೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2013, 19:30 IST
Last Updated 1 ಡಿಸೆಂಬರ್ 2013, 19:30 IST

ನವದೆಹಲಿ/ಮುಂಬೈ (ಪಿಟಿಐ): ಗುಜರಾತ್‌ ಪೊಲೀಸರು ಯುವತಿ ಮೇಲೆ ಅಕ್ರಮವಾಗಿ ಬೇಹುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಲಾದ ಪ್ರಕರಣ ಕುರಿತಂತೆ ಕೇಂದ್ರ ಸರ್ಕಾರ  ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಅವರು ಮುಂಬೈನಲ್ಲಿ ಹೇಳಿದ್ದಾರೆ.

‘ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಆಡಳಿತ ದುರ್ಬಳಕೆ ಆರೋಪ ಕುರಿತು ತನಿಖೆ ಎದುರಿಸುವರೆ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಿಂಧೆ, ‘ಕೇಂದ್ರ  ಮತ್ತು ರಾಜ್ಯದ ಗೃಹ ಕಾರ್ಯದರ್ಶಿಗಳು ತೀರ್ಮಾನ ಕೈಗೊಳ್ಳು­­ವ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು’ ಎಂದಿದ್ದಾರೆ.

 ವಿವಾದಾತ್ಮಕ ಮತ್ತು ಮಾಧ್ಯಮ­ದಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಈ  ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರವು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್‌ ಸೇರಿ­ದಂತೆ ಇನ್ನಿತರ ಕಡೆಗಳಿಂದ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ.

ಒಂದೇ ರಾಜ್ಯದೊಳಗೆ ನಡೆದ ಅಕ್ರಮ ಬೇಹುಗಾರಿಕೆ ಬಗ್ಗೆ ರಾಜ್ಯದ ಗೃಹ ಇಲಾಖೆ ಕಾರ್ಯದರ್ಶಿ ಅವರು ತನಿಖೆಗೆ ಆದೇಶಿಸಲು ಅಧಿಕಾರ ಹೊಂದಿದ್ದಾರೆ. ಆದರೆ, ಅಕ್ರಮ ಬೇಹುಗಾರಿಕೆಯು ಒಂದ­ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ನಡೆದಿ­ದ್ದರೆ ಅಂತಹ ಪ್ರಕರಣದ ತನಿಖೆಗೆ ಕೇಂದ್ರ ಗೃಹ ಕಾರ್ಯದರ್ಶಿಗಳ ಅನುಮತಿ ಅಗತ್ಯ ಎಂದು ಮೂಲಗಳು ತಿಳಿಸಿವೆ. ಗುಜರಾತ್‌ ಸರ್ಕಾರ ಈಗಾಗಲೇ ಈ ಪ್ರಕರಣದ ತನಿಖೆಗಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಿದೆ.

ಹಿನ್ನೆಲೆ: ಬಿಜೆಪಿ ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಪ್ತ, ಗುಜರಾತ್‌ನ ಮಾಜಿ ಗೃಹ ಸಚಿವ ಅಮಿತ್‌ ಷಾ ಅವರ ಸೂಚನೆಯಂತೆ ಗುಜರಾತ್‌ ಪೊಲೀಸರು ವಾಸ್ತುಶಿಲ್ಪಿ­ಯಾದ ಯುವತಿ ಮೇಲೆ ಬೇಹುಗಾರಿಕೆ ನಡೆಸಿ; ಆಕೆಯ ದೂರವಾಣಿ ಕರೆಗಳನ್ನು ಕದ್ದಾಲಿಸಿದ್ದರು. ಆಕೆ ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿದ್ದಾಗಲೂ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT