ADVERTISEMENT

ಕೇಂದ್ರ ಸರ್ಕಾರದಿಂದ ಸಾಂಸ್ಕೃತಿಕ ದಾಖಲೆಗಳ ರಾಷ್ಟ್ರೀಯ ಮಿಷನ್

ಇದೇ 17ರಂದು ಶಿವಮೊಗ್ಗದಲ್ಲೂ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2017, 19:33 IST
Last Updated 15 ಜೂನ್ 2017, 19:33 IST
ಮಹೇಶ್ ಶರ್ಮಾ
ಮಹೇಶ್ ಶರ್ಮಾ   

ನವದೆಹಲಿ: ಭಾರತದ ಸಾಂಸ್ಕೃತಿಕ ಮಹತ್ವದ ದಾಖಲೆಗಳನ್ನು ಸಂಗ್ರಹಿಸುವ ನೂತನ ರಾಷ್ಟ್ರೀಯ ಮಿಷನ್‌ ಅನ್ನು  (ನ್ಯಾಷನಲ್ ಮಿಷನ್ ಆನ್ ಕಲ್ಚರಲ್ ಮ್ಯಾಪಿಂಗ್ ಆಫ್ ಇಂಡಿಯಾ–ಎನ್‌ಎಂಸಿಎಂಐ) ಕೇಂದ್ರ ಸರ್ಕಾರ ರೂಪಿಸಿದೆ.

ಜನಸಂಘದ ಸಂಸ್ಥಾಪಕ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ತವರು ಮಥುರಾ ಸೇರಿ ದೇಶದ ನಾಲ್ಕು ಕಡೆ ಜೂನ್ 17ರಂದು ಏಕಕಾಲಕ್ಕೆ ಯೋಜನೆಗೆ ಚಾಲನೆ ಸಿಗಲಿದೆ. ಇದರಲ್ಲಿ ಶಿವಮೊಗ್ಗವೂ ಒಂದು.

‘ಏಕ ಭಾರತ, ಶ್ರೇಷ್ಠ ಭಾರತ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ ಭಾಗವಾಗಿ ಈ ಯೋಜನೆ ರೂಪುಗೊಂಡಿದೆ.

ದೀನ್‌ದಯಾಳ್ ಅವರ ಜನ್ಮಶತಮಾನೋತ್ಸವ ಸ್ಮರಣೆಗಾಗಿ ಈ ಕಾರ್ಯಕ್ರಮ ಸಮರ್ಪಿಸಲು ಕೇಂದ್ರ ನಿರ್ಧರಿಸಿದೆ.

ದೇಶದಲ್ಲಿ ವಿಶಿಷ್ಠ ಕಲೆ ಹೊಂದಿರುವ ಕಲಾವಿದರನ್ನು ಈ ಯೋಜನೆ ಸಂಪರ್ಕಿಸಲಿದ್ದು, ಅವರಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರಸ್ತುತಪಡಿಸಲು  ಅವಕಾಶ ಒದಗಿಸುತ್ತದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಅವರು ತಿಳಿಸಿದ್ದಾರೆ.

ಸಂಸ್ಕೃತಿ ಸಚಿವಾಲಯವು www.culturalmapping.nic.in ಎಂಬ ಹೆಸರಿನ ವೆಬ್‌ಸೈಟ್ ಆರಂಭಿಸಲಿದ್ದು, ದೇಶದ ಯಾವುದೇ ಕಲಾವಿದರು ಇದರಲ್ಲಿ ತಮ್ಮ ಹೆಸರನ್ನು ನೊಂದಾಯಿಸಬಹುದು. ಅಂತರ್ಜಾಲ ಸೌಲಭ್ಯ ಇಲ್ಲದ ಕಲಾವಿದರು ಕುಗ್ರಾಮಗಳಲ್ಲಿದ್ದರೂ ಅವರನ್ನು ಅಧಿಕಾರಿಗಳ ಮೂಲಕ ಸಂಪರ್ಕಿಸಲಾಗುವುದು ಎಂದು ಅವರು ಹೇಳಿದರು.

ಈವರೆಗೆ 1.2 ಲಕ್ಷ ಮಂದಿ ಈ ಯೋಜನೆಯಲ್ಲಿ  ನೋಂದಾಯಿಸಿಕೊಂಡಿದ್ದು, ಮುಂದಿನ  ಮೂರು ವರ್ಷದಲ್ಲಿ ಎಲ್ಲ ಕಲಾವಿದರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ.
*
ಭಾರತದ ಶ್ರೇಷ್ಠ ಸಂಸ್ಕೃತಿ ಹಾಗೂ ಕಲೆಯನ್ನು ಸಂರಕ್ಷಿಸುವುದು ಹಾಗೂ ಸಂಗ್ರಹಿಸುವುದು ಯೋಜನೆಯ ಮುಖ್ಯ ಉದ್ದೇಶ.
- ಮಹೇಶ್ ಶರ್ಮಾ,
ಕೇಂದ್ರ ಸಂಸ್ಕೃತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.