ADVERTISEMENT

ಕೇಜ್ರಿವಾಲ್–ಜೇಟ್ಲಿ ರಾಜಿ ಒಪ್ಪಂದ

ಎರಡು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣ ಇತ್ಯರ್ಥ

ಪಿಟಿಐ
Published 2 ಏಪ್ರಿಲ್ 2018, 19:30 IST
Last Updated 2 ಏಪ್ರಿಲ್ 2018, 19:30 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ : ಎರಡು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ತಾವು ರಾಜಿ ಒಪ್ಪಂದಕ್ಕೆ ಬಂದಿರುವುದಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೋರ್ಟ್‌ಗೆ ಸೋಮವಾರ ಜಂಟಿ ಅರ್ಜಿ ಸಲ್ಲಿಸಿದ್ದಾರೆ.

ಕೇಜ್ರಿವಾಲ್ ಅವರು ಈಗಾಗಲೇ ಜೇಟ್ಲಿ ಹಾಗೂ ಇತರರ ಕ್ಷಮೆ ಕೋರಿದ್ದಾರೆ. ಇತರ ಐವರು ಎಎಪಿ ಮುಖಂಡರ ಪೈಕಿ ಕುಮಾರ್ ವಿಶ್ವಾಸ್ ಅವರು ಕ್ಷಮೆ ಕೋರದ ಕಾರಣ ಅವರ ವಿರುದ್ಧದ ವಿಚಾರಣೆ ಮುಂದುವರಿಯಲಿದೆ.

ನ್ಯಾಯಮೂರ್ತಿ ಮನಮೋಹನ್ ಅವರ ಎದುರು ಇಬ್ಬರ ಪರ ವಕೀಲರಾದ ಮನಿಕ್ ದೊಗ್ರಾ ಹಾಗೂ ಅನುಪಮ್ ಶ್ರೀವಾಸ್ತವ ಅವರು ಹಾಜರಾಗಿ, ಅರ್ಜಿ ಸಲ್ಲಿಸಿದರು. ಆಕ್ಷೇಪ ವ್ಯಕ್ತವಾಗದಿದ್ದಲ್ಲಿ ಅರ್ಜಿಯನ್ನು ಸಂಬಂಧಪಟ್ಟ ಪೀಠಕ್ಕೆ ಮುಂದಿನ ವಿಚಾರಣೆಗಾಗಿ ವರ್ಗಾವಣೆ ಮಾಡುವುದಾಗಿ ಕೋರ್ಟ್ ತಿಳಿಸಿತು.

ADVERTISEMENT

ಜೇಟ್ಲಿ ಅವರು ಅಧ್ಯಕ್ಷರಾಗಿದ್ದಾಗ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ (ಡಿಡಿಸಿಎ) ಅವ್ಯವಹಾರ ನಡೆದಿದೆ ಎಂದು ಕೇಜ್ರಿವಾಲ್ ಹಾಗೂ ಎಎಪಿ ಮುಖಂಡರು ಗಂಭೀರ ಆರೋಪ ಮಾಡಿದ್ದರು. ಇದನ್ನು ಅಲ್ಲಗಳೆದಿದ್ದ ಜೇಟ್ಲಿ, 2015ರಲ್ಲಿ ಕೇಜ್ರಿವಾಲ್ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರಾದ ರಾಘವ್ ಚಂದ್ರ, ಕುಮಾರ್ ವಿಶ್ವಾಸ್, ಸಂಜಯ್ ಸಿಂಗ್, ಅಶುತೋಷ್ ಮತ್ತು ದೀಪಕ್ ಬಾಜ್‌ಪೈ ವಿರುದ್ಧ ₹10 ಕೋಟಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಕೇಜ್ರಿವಾಲ್ ಪರ ವಕೀಲರಾಗಿದ್ದ ರಾಮ್ ಜೇಠ್ಮಲಾನಿ ಅವರು ಪಾಟೀ ಸವಾಲು ನಡೆಸುವ ವೇಳೆ ತಮ್ಮ ವಿರುದ್ಧ ಆಕ್ಷೇಪಾರ್ಹ ಪದ ಬಳಸಿದರು ಎಂಬ ಕಾರಣಕ್ಕೆ ಜೇಟ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದರು. ಇದಕ್ಕೂ ಕೇಜ್ರಿವಾಲ್ ಕ್ಷಮೆ ಯಾಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.