ADVERTISEMENT

ಕೇರಳದಲ್ಲಿ ಭಾರಿ ಮಳೆ: ಮಡಿಕೇರಿ ಬಳಿ ರಸ್ತೆ ಕುಸಿತ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 19:59 IST
Last Updated 5 ಆಗಸ್ಟ್ 2013, 19:59 IST

ಇಡುಕ್ಕಿ/ಕೊಚ್ಚಿ (ಪಿಟಿಐ): ಕೇರಳದ ಇಡುಕ್ಕಿ, ಎರ್ನಾಕುಲಂ, ಆಲ್ವಾಯಿ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೋಮವಾರ ಸುರಿದ ಮಹಾಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭೂಕುಸಿತದಿಂದ 14 ಜನ ಮೃತಪಟ್ಟಿದ್ದು, ಹಲವರು ಕಣ್ಮರೆಯಾಗಿದ್ದಾರೆ.

ನೀರಿನಿಂದ ಆವೃತಗೊಂಡ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ರನ್‌ವೇಯಲ್ಲಿ ನೀರು ನಿಂತಿರುವುದರಿಂದ ಎರಡು ವಿಮಾನಗಳ ಮಾರ್ಗವನ್ನು ಬದಲಿಸಲಾಯಿತು.

ಕೊಚ್ಚಿ- ಬಹರೇನ್ ಹಾಗೂ ಮಂಗಳೂರು ಮಾರ್ಗವಾಗಿ ಹೊರಡಬೇಕಾದ ಕೊಚ್ಚಿ- ಕುವೈಟ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳನ್ನು ರದ್ದುಪಡಿಸಿದ್ದು, ಎರಡು ದಿನಗಳ ನಂತರ ಟಿಕೆಟ್ ಕಾದಿರಿಸಬಹುದು ಎಂದು ಪ್ರಯಾಣಿಕರಿಗೆ ತಿಳಿಸಲಾಗಿದೆ.

ಮಡಿಕೇರಿ ವರದಿ: ಮಳೆಯ ಅಬ್ಬರಕ್ಕೆ ಕೊಡಗು ತತ್ತರಿಸಿದ್ದು, ಮಡಿಕೇರಿ ಸಮೀಪದ ಕೊಯಿನಾಡು ಬಳಿ ರಾಜ್ಯ ಹೆದ್ದಾರಿಯು ಸೋಮವಾರ ಬೆಳಿಗ್ಗೆ ಐದು ಅಡಿಗಳಷ್ಟು ಕುಸಿದಿದೆ. ಮುಂಜಾಗ್ರತಾ ಕ್ರಮವಾಗಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಮಡಿಕೇರಿ- ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಂತಾಗಿದೆ. ಒಂದೆರಡು ದಿನ ಕಡಿಮೆಯಾಗಿದ್ದ ಮಳೆ ಭಾನುವಾರ ರಾತ್ರಿ ಆರ್ಭಟಿಸಿದೆ. ಮಳೆಯಿಂದಾಗಿ ಹೆದ್ದಾರಿಯ ಪಕ್ಕದಲ್ಲಿ ಹರಿಯುತ್ತಿರುವ ಪಯಸ್ವಿನಿ ನದಿಯ ನೀರಿನ ಹರಿವು ಹೆಚ್ಚಳವಾಗಿ, ಹೆದ್ದಾರಿ ಅಡಿಯ ಮಣ್ಣು ಜರಿಯಲು ಆರಂಭಿಸಿದೆ. 

ಬೆಳಿಗ್ಗೆ 9ರ ಹೊತ್ತಿಗೆ ಹೆದ್ದಾರಿಯ ಮೇಲೆ ಬಿರುಕು ಕಾಣಿಸಿಕೊಂಡಿದ್ದವು. ಒಂದೆರಡು ತಾಸು ಕಳೆಯುವಷ್ಟರಲ್ಲಿ ಈ ಗೆರೆಗಳು ದೊಡ್ಡದಾಗಿ, 4-5 ಅಡಿಯಷ್ಟು ದೊಡ್ಡದಾಗಿವೆ ಎಂದು ಸ್ಥಳೀಯ ಆಟೊರಿಕ್ಷಾ ಚಾಲಕರು ಹೇಳಿದರು.

ರಸ್ತೆಯ ಒಂದು ಬದಿ ಗುಡ್ಡ ಮತ್ತೊಂದು ಬದಿ ಪಯಸ್ವಿನಿ ನದಿ ಹರಿಯುತ್ತದೆ. ಗುಡ್ಡದಿಂದ ಹರಿದು ಬರುವ ನೀರಿಗೆ ದಾಟಿಹೋಗಲು ಯಾವುದೇ ಮಾರ್ಗವಿಲ್ಲ. ಹೀಗಾಗಿ ಭೂಮಿಯೊಳಗೆ ನೀರು ಇಂಗಲು ಆರಂಭಿಸಿದೆ. ಇದರಿಂದಾಗಿ ಮಣ್ಣು ಸಡಿಲುಗೊಂಡಿದೆ. ಮತ್ತೊಂದೆಡೆ ಪಯಸ್ವಿನಿ ನದಿಯ ನೀರಿನ ರಭಸ ಹೆಚ್ಚಾಗಿದ್ದು, ಮಣ್ಣು ಜರಿಯಲು ಆರಂಭಿಸಿದೆ. ಇದರಿಂದಾಗಿ ರಸ್ತೆ ಕುಸಿದಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದರು.

ಬದಲಿ ಸಂಚಾರ ಮಾರ್ಗ
ಬದಲಿ ಮಾರ್ಗವಾಗಿ ಮಡಿಕೇರಿ- ಭಾಗಮಂಡಲ- ಕರಿಕೆ- ಸುಳ್ಯ (ಸುಮಾರು 50 ಕಿ.ಮೀ. ಹೆಚ್ಚುವರಿ) ಅಥವಾ ಮಡಿಕೇರಿ- ಸೋಮವಾರಪೇಟೆ- ಶನಿವಾರಸಂತೆ- ಸಕಲೇಶಪುರ- ಗುಂಡ್ಯ- ಸುಬ್ರಮಣ್ಯ- ಸುಳ್ಯ (ಸುಮಾರು 100 ಕಿ.ಮೀ. ಹೆಚ್ಚುವರಿ) ಮಾರ್ಗ ಬಳಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.