ADVERTISEMENT

ಕೇರಳದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

ಏಜೆನ್ಸೀಸ್
Published 8 ಮಾರ್ಚ್ 2018, 8:41 IST
Last Updated 8 ಮಾರ್ಚ್ 2018, 8:41 IST
ಮಹಾತ್ಮ ಗಾಂಧಿ ಪ್ರತಿಮೆ– ಫೋಟೋ ಕೃಪೆ: ಎಎನ್‌ಐ
ಮಹಾತ್ಮ ಗಾಂಧಿ ಪ್ರತಿಮೆ– ಫೋಟೋ ಕೃಪೆ: ಎಎನ್‌ಐ   

ತಿರುವನಂತಪುರಂ: ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಭದಲ್ಲಿ ಮಹಾತ್ಮ ಗಾಂಧಿ ಪುತ್ಥಳಿಯನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾಗಿ ಗುರುವಾರ ಪೊಲೀಸರು ಮಾಹಿತಿ ನೀಡಿದ್ದಾರೆ.

ತ್ರಿಪುರಾದಲ್ಲಿ ರಷ್ಯಾ ಕಮ್ಯುನಿಸ್ಟ್‌ ನಾಯಕ ಲೆನಿನ್‌ನ ಪ್ರತಿಮೆಗಳನ್ನು ಧ್ವಂಸಗೊಳಿಸಿದ ಬೆನ್ನಲೇ ದೇಶದ ವಿವಿಧ ಭಾಗಗಳಲ್ಲಿ ಅನೇಕ ಮುಖಂಡರ ಪ್ರತಿಮೆಗಳನ್ನು ಭಗ್ನ ಮಾಡಿರುವ ಬಗ್ಗೆ ವರದಿಯಾಗಿದೆ. ತಳಿಪರಂಭದ ತಾಲ್ಲೂಕು ಕಚೇರಿ ಎದುರಿನ ಗಾಂಧಿ ಪ್ರತಿಮೆಯನ್ನೂ ಧ್ವಂಸಗೊಳಿಸುವ ಪ್ರಯತ್ನ ನಡೆದಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಗಾಂಧಿ ಪ್ರತಿಮೆ ಮೇಲೆ ದುಷ್ಕರ್ಮಿಗಳು ಕಲ್ಲು ಮತ್ತು ಬಾಟಲಿಗಳನ್ನು ಎಸೆದಿದ್ದು, ಪ್ರತಿಮೆಯ ಕನ್ನಡಕ ಮತ್ತು ಹಾರಕ್ಕೆ ಹಾನಿಯಾಗಿದೆ. ಗುರುವಾರ ಬೆಳಿಗ್ಗೆ ಈ ಕುಕೃತ್ಯ ಗುರುತಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ತಾಲ್ಲೂಕು ಕಚೇರಿ ಸಮೀಪದ ಸಿಸಿಟಿವಿಗಳಲ್ಲಿ ದಾಖಲಾಗಿರುವ ದೃಶ್ಯಗಳಲ್ಲಿ ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿದೆ. 2005ರಲ್ಲಿ ಮಾಜಿ ಮುಖ್ಯಮಂತ್ರಿ ಓಮನ್‌ ಚಾಂಡಿ ಅನಾವರಣಗೊಳಿಸಿದ್ದ ಗಾಂಧಿ ಪ್ರತಿಮೆ ಭಗ್ನಗೊಳಿಸಿರುವುದನ್ನು ಎಲ್ಲ ರಾಜಕೀಯ ಪಕ್ಷಗಳು ಖಂಡಿಸಿವೆ.

ಸೋಮವಾರದಿಂದ ಮೂರು ದಿನಗಳಲ್ಲಿ ಉತ್ತರ ಪ್ರದೇಶದ ಮೀರಠ್‌ನ ಮವಾನ್‌ ಖುರ್ದ್‌ನಲ್ಲಿ ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿ, ಕೋಲ್ಕತ್ತದ ಕಾಳಿಘಾಟ್‌ನಲ್ಲಿದ್ದ ಜನಸಂಘದ ಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಪುತ್ಥಳಿ, ವೆಲ್ಲೂರ್‌ ಜಿಲ್ಲೆಯ ತಿರುಪತ್ತೂರು ನಗರ ಪಾಲಿಕೆ ಆವರಣದಲ್ಲಿದ್ದ ಪೆರಿಯಾರ್‌ ರಾಮಸ್ವಾಮಿ ಅವರ ಪುತ್ಥಳಿ ಹಾಗೂ ತ್ರಿಪುರದಲ್ಲಿ ಲೆನಿನ್‌ ಪ್ರತಿಮೆ ಧ್ವಂಸಗೊಳಿಸಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.