ADVERTISEMENT

ಕೇರಳ: ರ್‍ಯಾಂಕ್‌ ಗಳಿಸಿದ್ದ 96ರ ಅಜ್ಜಿಗೆ ಸಚಿವರಿಂದ ಲ್ಯಾಪ್‌ಟ್ಯಾಪ್‌ ಕೊಡುಗೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2018, 10:34 IST
Last Updated 8 ನವೆಂಬರ್ 2018, 10:34 IST
ಕಾರ್ತ್ಯಾಯಿನಿ ಅಮ್ಮ
ಕಾರ್ತ್ಯಾಯಿನಿ ಅಮ್ಮ   

ತಿರುವನಂತಪುರ:ಕೇರಳದ ಸಾಕ್ಷರತಾ ಮಿಷನ್ಅಕ್ಷರಲಕ್ಷಂಎಂಬ ಯೋಜನೆಯಡಿಯಲ್ಲಿ 4ನೇ ತರಗತಿ ತತ್ಸಮಾನ ಪರೀಕ್ಷೆ ಬರೆದು ನೂರಕ್ಕೆ 98 ಅಂಕ ಗಳಿಸಿ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದ 96ರ ಹರೆಯದಕಾರ್ತ್ಯಾಯಿನಿ ಅಮ್ಮ ಅವರನ್ನು ಕೇರಳ ರಾಜ್ಯ ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಭೇಟಿ ಮಾಡಿ, ಲ್ಯಾಪ್‌ಟಾಪ್‌ ಕೊಡುಗೆ ನೀಡಿದ್ದಾರೆ.

ಆಲಪ್ಪುಳ ಜಿಲ್ಲೆಯ ಕಾರ್ತ್ಯಾಯಿನಿ ಅಮ್ಮ ಕಂಪ್ಯೂಟರ್‌ ಕಲಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಹೀಗಾಗಿ ಸಚಿವ ರವೀಂದ್ರನಾಥ್‌ ಖುದ್ದಾಗಿ ಅವರ ಮನೆಗೆ ಭೇಟಿ, ನೀಡಿ ಕೆಲ ಹೊತ್ತು ಅವರೊಂದಿಗೆ ಮಾತನಾಡಿ, ಲ್ಯಾಪ್‌ಟಾಪ್‌ ನೀಡಿದ್ದಾರೆ.

‘ಸಣ್ಣ ಮಕ್ಕಳು ಕಲಿಯುತ್ತಿರುವುದನ್ನು ನೋಡುತ್ತಿದ್ದಾಗ ನನ್ನಲ್ಲೂ ಕಲಿಯಬೇಕೆಂಬ ಆಸೆ ಮೂಡಿತ್ತು. ಸಾಕ್ಷರತಾ ಅಭಿಯಾನದವರು ಕಲಿಯಲು ಬರುತ್ತೀರಾ ಎಂದು ಕೇಳಿದರು. ಅದಕ್ಕೆ ನಾನು ಒಪ್ಪಿಕೊಂಡೆ’ ಎಂದು ಕಾರ್ತ‍್ಯಾಯಿನಿ ಅಮ್ಮ ತಮ್ಮ ಓದು ಶುರುವಾದ ಬಗೆಯನ್ನು ವಿವರಿಸಿದ್ದರು.

ADVERTISEMENT

ಆಗಸ್ಟ್‌ನಲ್ಲಿ ಕಾರ್ತ‍್ಯಾಯಿನಿ ಅಮ್ಮ ಮೊದಲ ಬಾರಿ ಪರೀಕ್ಷೆ ಬರೆದಿದ್ದರು. ಅವರು ಪರೀಕ್ಷೆ ಬರೆಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿ, ನೆಟಿಜನ್‌ಗಳಿಂದ ಪ್ರಶಂಸೆಯ ಸುರಿಮಳೆಯಾಗಿತ್ತು. ವಿನೋದ್ ರಡ್ಡಿ ಎಂಬ ಟ್ವೀಟಿಗರೊಬ್ಬರು 96ರ ಹರೆಯದ ಕೇರಳದ ಅಜ್ಜಿ ಮೊದಲ ಬಾರಿ ಪರೀಕ್ಷೆ ಬರೆದು ಓದುವ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ್ದಾರೆ ಎಂದು ಟ್ವೀಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.