ADVERTISEMENT

ಕೊಡಗಿನಲ್ಲಿ ಪುನುಗು ಬೆಕ್ಕಿನ ಮಲ ಬಳಸಿ ತಯಾರಾಗುತ್ತಿದೆ ಜಗತ್ತಿನ ದುಬಾರಿ ಕಾಫಿ!

ಪಿಟಿಐ
Published 12 ಸೆಪ್ಟೆಂಬರ್ 2017, 17:50 IST
Last Updated 12 ಸೆಪ್ಟೆಂಬರ್ 2017, 17:50 IST
ಸಂಗ್ರಹ ಚಿತ್ರ - ಕೃಪೆ ರಾಯಿಟರ್ಸ್
ಸಂಗ್ರಹ ಚಿತ್ರ - ಕೃಪೆ ರಾಯಿಟರ್ಸ್   

ನವದೆಹಲಿ: ಕಾಫಿ ಬೆಳೆ ಮತ್ತು ರಫ್ತು ಮಾಡುವ  ಏಷ್ಯಾದ ದೇಶಗಳಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತ ಜಗತ್ತಿನ ದುಬಾರಿ ಕಾಫಿಯನ್ನು ತಯಾರಿಸುತ್ತಿದೆ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಈ ದುಬಾರಿ ಕಾಫಿ ತಯಾರಾಗುತ್ತಿದೆ. ವಿಶೇಷವೆಂದರೆ ಈ ಕಾಫಿ ತಯಾರಿಗೆ ಪುನುಗು ಬೆಕ್ಕಿನ (civet cat) ಮಲವನ್ನು ಬಳಸಲಾಗುತ್ತಿದೆ! 

ಲುವಾರ್ಕ್ ಕಾಫಿ ಎಂದು ಕರೆಯಲ್ಪಡುವ ಸಿವೆಟ್ ಕಾಫಿ ತಯಾರಿಕೆಯ ವಿಧಾನವೇ ವಿಚಿತ್ರ ರೀತಿಯದ್ದು.

ಸಿವೆಟ್ ಕಾಫಿ ತಯಾರಿಸುವುದು ಹೇಗೆ?
ಪುನುಗು ಬೆಕ್ಕು ಕಾಫಿ ಬೀಜವನ್ನು ತಿನ್ನುತ್ತದೆ. ಈ ಬೆಕ್ಕಿನ ಮಲವನ್ನು ಸಂಗ್ರಹಿಸಿ ಸಂಸ್ಕರಿಸಿದ ನಂತರ ಆ ಕಾಫಿ ಬೀಜಗಳನ್ನು ಮಾರಲಾಗುತ್ತದೆ. ಪುನುಗು ಬೆಕ್ಕಿನ ಮಲದಲ್ಲಿರುವ ಕಾಫಿ ಬೀಜಗಳು ಹೆಚ್ಚು ಪೌಷ್ಟಿಕಾಂಶದಿಂದ ಕೂಡಿದ್ದು ಇವುಗಳನ್ನು ಸಂಗ್ರಹಿಸುವುದಕ್ಕೆ, ಸಂಸ್ಕರಿಸುವುದಕ್ಕೆ ಮತ್ತು ಗುಣಮಟ್ಟವನ್ನು ಕಾಪಾಡುವ ಪ್ರಕ್ರಿಯೆಗೆ ಹೆಚ್ಚಿನ ಶ್ರಮ ಮತ್ತು ವೆಚ್ಚ ತಗಲುವುದರಿಂದ ಈ ಕಾಫಿ ತುಂಬಾ ದುಬಾರಿಯಾಗಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಮತ್ತು ಯುರೋಪ್ ‍ನಲ್ಲಿ ಸಿವೆಟ್  ಕಾಫಿಗೆ ಬಾರಿ ಬೇಡಿಕೆ ಇದ್ದು ವಿದೇಶಗಳಲ್ಲಿ ಈ ಕಾಫಿ ಬೀಜದ ಬೆಲೆ ಕೆಜಿಗೆ ₹20,000ದಿಂದ ₹25,000 ಇದೆ.

ADVERTISEMENT

ಇದೀಗ ಕೊಡಗು ಜಿಲ್ಲೆಯಲ್ಲಿ ಕೂರ್ಗ್ ಕನ್ಸೋಲಿಡೇಟೆಡ್ ಕಮೊಡಿಟೀಸ್ (ಸಿಸಿಸಿ) ಸಂಸ್ಥೆ ಸಿವೆಟ್ ಕಾಫಿ ತಯಾರಿ ಆರಂಭಿಸಿದೆ, ಆರಂಭಿಕ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ಸಿವೆಟ್ ಕಾಫಿ ತಯಾರಿ ಮಾಡಲಾಗುವುದು ಎಂದು ಪ್ರಸ್ತುತ ಸಂಸ್ಥೆ ಹೇಳಿದೆ.

ಆರಂಭಿಕ ಹಂತದಲ್ಲಿ 20 ಕೆಜಿಯಷ್ಟು ಸಿವೆಟ್ ಕಾಫಿ ಬೀಜ ತಯಾರಿಸಲಾಗಿದೆ. 2015- 16ರಲ್ಲಿ 200 ಕೆಜಿಯಷ್ಟು ಕಾಫಿ ಬೀಜ ತಯಾರು ಮಾಡಲಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ಇದಕ್ಕಿಂತ ಹೆಚ್ಚು ಕಾಫಿ ಬೀಜ ಉತ್ಪಾದನೆಯಾಗುವ ನಿರೀಕ್ಷೆ ಇದೆ ಎಂದು ಸಿಸಿಸಿಯ ಸಂಸ್ಥಾಪಕರಲ್ಲೊಬ್ಬರಾದ ನರೇಂದ್ರ ಹೆಬ್ಬಾರ್ ಪಿಟಿಐ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಪುನುಗು ಬೆಕ್ಕುಗಳು ಕಾಫಿ ಬೀಜದ ಮೇಲಿರುವ ಹಣ್ಣಿನ ತಿರುಳನ್ನು ಮಾತ್ರ ತಿನ್ನುತ್ತದೆ, ಬೀಜವನ್ನಲ್ಲ. ಪುನುಗು ಬೆಕ್ಕಿನ ಹೊಟ್ಟೆಯಲ್ಲಿರುವ ಕಿಣ್ವ (ಎನ್‍ಜೈಮ್‍ಗಳು) ಈ ಕಾಫಿ ಬೀಜದ ರುಚಿಯನ್ನು ಹೆಚ್ಚಿಸುತ್ತವೆ. ಇದೀಗ ನಮ್ಮ ರೈತರಿಗೆ ಸಿವಿಟ್ ಕಾಫಿಯ ಮಹತ್ವ ಅರಿವಾಗಿದೆ. ಇತರ ದೇಶಗಳಂತೆ ನಾವು ಪುನುಗು ಬೆಕ್ಕುಗಳನ್ನು ಹಿಡಿದು ಗೂಡಿನಲ್ಲಿ ಹಾಕಿ ಕಾಫಿ ಬೀಜಗಳನ್ನು ತಿನ್ನಿಸುವುದಿಲ್ಲ. ಇಲ್ಲಿ ಎಲ್ಲವೂ ನೈಸರ್ಗಿಕ ವಿಧಾನದಿಂದಲೇ ಕಾಫಿ ತಯಾರಿಸಲಾಗುತ್ತಿದೆ ಎಂದು ಹೆಬ್ಬಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.