ADVERTISEMENT

ಕೋರ್ಟ್ ತೀರ್ಪು: ಮೌನಕ್ಕೆ ಶರಣಾದ ಸಚಿವ ಚಿದಂಬರಂ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 20:10 IST
Last Updated 4 ಫೆಬ್ರುವರಿ 2012, 20:10 IST

ತಿರುನಲ್ವೇಲಿ (ಪಿಟಿಐ): 2ಜಿ ಹಗರಣದಲ್ಲಿ ತಮ್ಮ ವಿರುದ್ಧದ ಅರ್ಜಿಯನ್ನು ವಜಾ ಮಾಡಿರುವ ದೆಹಲಿ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪಿನ ಬಗ್ಗೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಶನಿವಾರ ರಾತ್ರಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾದರು.

ತೀರ್ಪು ಹೊರಬಿದ್ದ ಬಳಿಕ ದೆಹಲಿಯಿಂದ ಇಲ್ಲಿಗೆ ಪ್ರಯಾಣ ಬೆಳೆಸಿದ ಸಚಿವರು, ಕೂಡುಂಕುಳಂ ಅಣು ವಿದ್ಯುತ್ ಯೋಜನೆಯ ಶೀಘ್ರ ಆರಂಭವನ್ನು ಬೆಂಬಲಿಸುವ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಆದರೆ ಈ ಸಂದರ್ಭದಲ್ಲಿ ಅವರು ಕೋರ್ಟ್ ತೀರ್ಪನ್ನು ಉಲ್ಲೇಖಿಸಲಿಲ್ಲ. ಬದಲಿಗೆ, ಸ್ಥಳೀಯರ ಪ್ರತಿಭಟನೆಯಿಂದ ನೆನೆಗುದಿಗೆ ಬಿದ್ದಿರುವ ಭಾರತ- ರಷ್ಯ ಸಹಭಾಗಿತ್ವದ ವಿವಾದಿತ ಕೂಡುಂಕುಳಂ ಯೋಜನೆಯ ಬಗ್ಗೆ ಮಾತ್ರ ಮಾತನಾಡಿದರು.

ಕೂಡುಂಕುಳಂ ವಿರೋಧಿ ಪ್ರತಿಭಟನಾಕಾರರಿಗೆ ಅಕ್ರಮವಾಗಿ ಹಣ ಸಂದಾಯ ಆಗಿರುವ ಆರೋಪಗಳ ಬಗ್ಗೆ ಕೇಂದ್ರ ಸರ್ಕಾರ ತನಿಖೆ ನಡೆಸುತ್ತಿದೆ ಎಂದರು.

ಇದು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.