ADVERTISEMENT

ಕ್ಷಮೆ ಕೇಳಿದ ಎಸ್‌ಐ : ಶಿಕ್ಷೆ ರದ್ದು

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST

ನವದೆಹಲಿ: ನ್ಯಾಯಾಂಗ ನಿಂದನೆಗಾಗಿ ಒಂದು ತಿಂಗಳ ಜೈಲು ಶಿಕ್ಷೆ ಎದುರಿಸುತ್ತಿದ್ದ ಬೆಂಗಳೂರಿನ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ ಒಬ್ಬರು ಬೇಷರತ್‌ ಕ್ಷಮೆ ಯಾಚಿಸಿದ ಕಾರಣ, ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಬೆಂಗಳೂರಿನ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ ಸಬ್ ಇನ್‌ಸ್ಪೆಕ್ಟರ್ ಸುನಿಲ್ ಎಚ್‌.ಬಿ ವಿರುದ್ಧ ನ್ಯಾಯಾಂಗ ನಿಂದನೆ ದೂರು ದಾಖಲಾಗಿತ್ತು.

ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯೊಬ್ಬರಿಗೆ ಮಂಜೂರಾಗಿದ್ದ ನಿರೀಕ್ಷಣಾ ಜಾಮೀನಿನ ಆದೇಶದ ಪ್ರತಿಯನ್ನು ಸುನಿಲ್ ಎಸೆದಿದ್ದರು ಎಂದು ಆ ಆರೋಪಿ ಪರ ವಕೀಲರು ಸೆಷನ್ಸ್‌ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.

ADVERTISEMENT

ಸೆಷನ್ಸ್ ನ್ಯಾಯಾಲಯವು ನ್ಯಾಯಾಂಗ ನಿಂದನೆ ಕಾಯ್ದೆ ಅಡಿ ಸುನಿಲ್ ಅವರ ವಿರುದ್ಧ ತೀರ್ಪು ನೀಡಿತ್ತು.

ಕರ್ನಾಟಕ ಹೈಕೋರ್ಟ್‌ ಸಹ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿತ್ತು. ಅದರ ವಿರುದ್ಧ ಸುನಿಲ್, ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

‘ಸುನಿಲ್ ಬೇಷರತ್ ಕ್ಷಮೆ ಯಾಚಿಸಿದ ಕಾರಣ ಅವರಿಗೆ ನೀಡಿದ್ದ ಜೈಲು ಶಿಕ್ಷೆ ಮತ್ತು ₹ 2,000 ದಂಡವನ್ನು ರದ್ದು ಮಾಡಲಾಗಿದೆ’ ಎಂದು ನ್ಯಾಯಮೂರ್ತಿಗಳಾದ
ಅರುಣ್ ಮಿಶ್ರಾ ಮತ್ತು ಯು.ಯು.ಲಲಿತ್ ಅವರಿದ್ದ ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.