ADVERTISEMENT

ಕ್ಷುಲ್ಲಕ ಕಾರಣಕ್ಕೆ ಅತ್ಯಾಚಾರ ಆರೋಪಿಗಳ ಬಿಡುಗಡೆ ಸಲ್ಲ:ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕ್ಷುಲ್ಲಕ ಕಾರಣಕ್ಕೆ ಬಿಡುಗಡೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ಬಿಡುಗಡೆ ಮಾಡಿರುವ ಹೈಕೋರ್ಟ್ ಆದೇಶವನ್ನು ರದ್ದುಪಡಿಸಿದ ನ್ಯಾಯಮೂರ್ತಿ  ಪಿ. ಸದಾಶಿವಂ ಮತ್ತು ರಂಜನ್ ಗೊಗೊಯಿ ಅವರನ್ನು ಒಳಗೊಂಡ ನ್ಯಾಯಪೀಠವು, ಅತ್ಯಾಚಾರ ಆರೋಪಿಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಗೆ ಅವಕಾಶವಿದ್ದರೂ ಅತ್ಯಾಚಾರ ನಡೆದಿರುವುದನ್ನು ಖಚಿತಪಡಿಸಿಕೊಳ್ಳುವುದು ನ್ಯಾಯಾಲಯದ ಕೆಲಸ ಎಂದು ತಿಳಿಸಿದೆ.

ನ್ಯಾಯಾಲಯವು ಸಾಕ್ಷಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು ಮತ್ತು ಯಾವುದೇ ಸಂದರ್ಭದಲ್ಲೂ ಕ್ಷುಲ್ಲಕ ಕಾರಣಕ್ಕೆ ಅಪರಾಧಿಗಳನ್ನು ದೋಷಮುಕ್ತ ಎಂದು ಬಿಡುಗಡೆ ಮಾಡಬಾರದು ಎಂದು ನ್ಯಾಯಪೀಠ ಹೇಳಿದೆ.

ಮಹಿಳೆಯರ ವಿರುದ್ಧದ ಅಪರಾಧಗಳು  ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ ಎಂದಿರುವ ನ್ಯಾಯಮೂರ್ತಿಗಳು, 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಮುನೇಶ್ ಎಂಬಾತನನ್ನು ಬಿಡುಗಡೆ ಮಾಡಿ ಅಲಹಾಬಾದ್ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವ ಮೂಲಕ ಉತ್ತರಪ್ರದೇಶ ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿದ್ದಾರೆ.

ಬುಲಂದರ್‌ಶಹರ್ ಜಿಲ್ಲೆಯ ರೋಶನಿ ಎಂಬ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಮುನೇಶ್‌ಗೆ ಸೆಷನ್ ನ್ಯಾಯಾಲಯವು ಮರಣದಂಡನೆ ವಿಧಿಸಿತ್ತು.ಆದರೆ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿತ್ತು ಮತ್ತು ಕೆಲವು ಸಾಕ್ಷಿಗಳ ಹೇಳಿಕೆಗಳು ವಿರೋಧಾಭಾಸಗಳಿಂದ ಕೂಡಿದ್ದವು ಎಂಬ ಕಾರಣಕ್ಕೆ ಹೈಕೋರ್ಟ್ ಆರೋಪಿಯನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಹೈಕೋರ್ಟ್ ನೀಡಿರುವ ಕಾರಣ ಸಮಂಜಸವಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಸುಪ್ರೀಂಕೋರ್ಟ್ ಆದೇಶವನ್ನು ರದ್ದುಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.