ADVERTISEMENT

ಖಗ್ರಾಸ ಚಂದ್ರಗ್ರಹಣ ಮೈಮನ ತುಂಬಿದ ಬೆರಗು..

​ಪ್ರಜಾವಾಣಿ ವಾರ್ತೆ
Published 16 ಜೂನ್ 2011, 19:30 IST
Last Updated 16 ಜೂನ್ 2011, 19:30 IST

 ನವದೆಹಲಿ (ಪಿಟಿಐ): ಹಾಲಿನಂತಹ ಬೆಳದಿಂಗಳು ಚೆಲ್ಲುತ್ತಿದ್ದ ಚಂದ್ರ ಮೆಲ್ಲಮೆಲ್ಲನೆ ಮಸುಕಾದ, ನೋಡುನೋಡುತ್ತಾ ತಾಮ್ರವರ್ಣದ ಕೆಂಬಣ್ಣ ಸೂಸಿದ, ಕಿತ್ತಳೆ ವರ್ಣದಿಂದ ಕಂಗೊಳಿಸಿದ, ಕತ್ತಲಲ್ಲಿ ಹುದುಗಲು ಮೊದಲಾಗಿ ಅದೃಶ್ಯನಾಗಿಯೇ ಹೋದ...

ರಾಷ್ಟ್ರದ ಕೋಟ್ಯಂತರ ಜನ, ಅಂತರಿಕ್ಷ ವೀಕ್ಷಕರು ಹಾಗೂ ಆಸಕ್ತರು ಅಂತರಿಕ್ಷದ ಈ ಬೆರಗು ಕಣ್ತುಂಬಿಕೊಂಡು ಬುಧವಾರ ರಾತ್ರಿ ಸಂಭವಿಸಿದ ಶತಮಾನದ ಅತ್ಯಂತ ದೀರ್ಘ ಹಾಗೂ ಗಾಢಾಂಧಕಾರದ ಚಂದ್ರಗ್ರಹಣಕ್ಕೆ ಸಾಕ್ಷಿಯಾದರು.

ರಾಷ್ಟ್ರದ ರಾಜಧಾನಿ ಸೇರಿದಂತೆ ದೇಶದೆಲ್ಲೆಡೆ ಗೋಚರಿಸಿದ ಈ ಗ್ರಹಣವನ್ನು ಆಸಕ್ತರು ಬಯಲುಗಳಲ್ಲಿ, ಕಟ್ಟಡಗಳ ಮೇಲ್ಛಾವಣಿಗಳ ಮೇಲೆ ಹಾಗೂ ತಾರಾಲಯಗಳಿಗೆ ಜಮಾಯಿಸಿ ವೀಕ್ಷಿಸಿದರು.

ರಾಜಧಾನಿಯಲ್ಲಿ ಮೋಡಗಳಿಲ್ಲದ ಶುಭ್ರ ಆಕಾಶದಲ್ಲಿ ರಾತ್ರಿ 10.54ಕ್ಕೆ  ಭೂಮಿಯ ನೆರಳಿನಲ್ಲಿ ಚಂದ್ರ ಮರೆಯಾಗಲು ಮೊದಲಾದ. ಆರಂಭದಲ್ಲಿ ಚಂದ್ರನ ಹಾಲಿನಂತಹ ಬೆಳಕನ್ನು ಮಸುಕು ಮಾಡಿದ ಭೂಮಿಯ ನೆರಳು ನಂತದ ಅದನ್ನು ತಾಮ್ರದ ಕೆಂಬಣ್ಣಕ್ಕೆ ತಿರುಗಿಸಿ ಆಮೇಲೆ ಕಿತ್ತಳೆ ಬಣ್ಣದ ಹೊಳಪು ನೀಡಿತು.

ಇದಾಗುತ್ತಿದ್ದಂತೆ 100 ನಿಮಿಷ ಕಾಲ ಚಂದ್ರ ಸಂಪೂರ್ಣ ಅದೃಶ್ಯನಾಗಿ ಕತ್ತಲೆ ಆವರಿಸಿತು. ಪೂರ್ಣ ಗ್ರಹಣ ಅವಧಿಯಲ್ಲಿ ರಾತ್ರಿ 12.52ರಿಂದ 2.32ರವರೆಗೆ ಚಂದ್ರ ನಾಪತ್ತೆಯಾದರೆ ಪಾರ್ಶ್ವ ಗ್ರಹಣದ ಅವಧಿ 10.54ಕ್ಕೆ ಶುರುವಾಗಿ ಬೆಳಗಿನ ಜಾವ 4.30ರವರೆಗೂ ಇತ್ತು.

ಹವ್ಯಾಸಿ ಅಂತರಿಕ್ಷ ವೀಕ್ಷಕರು, ಖಗೋಳ ತಜ್ಞರು, ಉತ್ಸಾಹಿ ಛಾಯಾಗ್ರಾಹಕರು ದೂರದರ್ಶಕ ಮತ್ತು ಕ್ಯಾಮರಾಗಳಲ್ಲಿ ಖಗೋಳ ವಿದ್ಯಮಾನದ ಕ್ಷಣ ಕ್ಷಣವನ್ನೂ ಸೆರೆ ಹಿಡಿದು ಅವನ್ನು `ಚಿತ್ರ ಸಂಗ್ರಹ ನಿಧಿ~ಗೆ  ಕೊಡುಗೆಯಾಗಿ ನೀಡಿದರು. ರಾಷ್ಟ್ರದ ವಿವಿಧೆಡೆಯ ಗ್ರಹಣದ ಭಿನ್ನ ಅವಸ್ಥೆಗಳನ್ನು ಪರಿವೀಕ್ಷಿಸಲು ಅನುಕೂಲವಾಗಲೆಂದು ಸ್ಪೇಸ್ ಈ `ಚಿತ್ರ ನಿಧಿ ಸಂಗ್ರಹ~ ಯೋಜನೆ ಹಾಕಿಕೊಂಡಿತ್ತು.

`ನಾನು ಹಿಂದೆಂದೂ ಇಂತಹ ಸಂಪೂರ್ಣ ಗ್ರಹಣವನ್ನು ನೋಡಿರಲೇ ಇಲ್ಲ. ಈ ಬಾರಿ ಖಗೋಳ ವಿಸ್ಮಯ ವೀಕ್ಷಿಸಿ ಮೂಕನಾಗಿ ಹೋದೆ~ ಎಂದ ಶಿಕ್ಷಕಿ ನಿಷಾ ಗುಪ್ತಾ ಅವರ ಬೆರಗು ಬಹುತೇಕರ ಪ್ರತಿಕ್ರಿಯೆಯಲ್ಲಿ ಮಾರ್ದನಿಸಿತು.

ಇಲ್ಲಿನ ಸ್ಪೇಸ್ (ಸೈನ್ಸ್ ಪಾಪ್ಯುಲರೈಸೇಷನ್ ಅಸೋಷಿಯೇಷನ್ ಆಫ್ ಕಮ್ಯುನಿಕೇಟರ್ಸ್‌ ಅಂಡ್ ಎಜುಕೇಟರ್ಸ್‌) ಮತ್ತಿತರ ವಿಜ್ಞಾನ ಸಂಸ್ಥೆಗಳು ಇದೇ ಸಂದರ್ಭದಲ್ಲಿ ಗ್ರಹಣದ ಬಗೆಗಿನ ಮೂಢನಂಬಿಕೆಗಳನ್ನು ಹೋಗಲಾಡಿಸಲು ಶ್ರಮಿಸಿದವು. ಗ್ರಹಣದ ವೇಳೆ ಆಹಾರ ಸೇವನೆ ಉತ್ತೇಜಿಸಿದ ಈ ಸಂಸ್ಥೆಗಳು, ಗರ್ಭಿಣಿಯರಿಗೆ ಮನೆಯಿಂದ ಹೊರಬಂದು ಗ್ರಹಣ ವೀಕ್ಷಿಸಲು ಕೂಡ ಪ್ರೋತ್ಸಾಹಿಸಿದವು.

ಸರ್ಕಾರೇತರ ಸಂಸ್ಥೆಯಾದ `ಸ್ಪೇಸ್~ ನೆಹರೂ ತಾರಾಲಯದಲ್ಲಿ ಚಂದ್ರೋತ್ಸವವನ್ನೂ  ಆಯೋಜಿಸಿತ್ತು. ಆಹಾರ ಸೇವನೆಗೆ ಮುನ್ನ ಹಾಗೂ ನಂತರ ವ್ಯಕ್ತಿಯ ಆರೋಗ್ಯದ ಬಗ್ಗೆ ವರದಿ ನೀಡುವ ಕಾರ್ಯವನ್ನೂ ಇದು ಕೈಗೊಂಡಿತ್ತು. ನಂತರ ಈ ಕ್ರೋಡೀಕೃತ ವರದಿಯನ್ನು ಅದು ಯುನೆಸ್ಕೊಗೆ ಕೂಡ ಕಳುಹಿಸಿಕೊಡಲಿದೆ.


ಪೂರ್ವ ಆಫ್ರಿಕಾ, ಮಧ್ಯ ಪ್ರಾಚ್ಯ, ಮಧ್ಯ ಏಷ್ಯಾ ಮತ್ತು ಪಶ್ಚಿಮ ಆಸ್ಟ್ರೇಲಿಯಾ ಜನತೆ ಕೂಡ ಗ್ರಹಣವನ್ನು ಸಂಪೂರ್ಣ ವೀಕ್ಷಿಸಿದರು. ಗ್ರಹಣ ಸರಿಯಾಗಿ ಮಧ್ಯದ ಅವಧಿಗೆ ಬಂದಾಗ ಚಂದ್ರ ಮಾರಿಷಸ್ ನೆತ್ತಿಯ ಮೇಲೆ ಇದ್ದ. ಪೂರ್ವ ಬ್ರೆಜಿಲ್, ಉರುಗ್ವೆ, ಅರ್ಜೆಂಟೀನಾ ರಾಷ್ಟ್ರಗಳ ಜನರೂ ಪೂರ್ಣ ಗ್ರಹಣ ವೀಕ್ಷಿಸಿದರು. ಉತ್ತರ ಅಮೆರಿಕ ಜನರು ಈ ವಿಸ್ಮಯದಿಂದ ವಂಚಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT