ADVERTISEMENT

ಖಾತೆಗೆ ನೇರ ಹಣ: ಸರ್ಕಾರ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 9:50 IST
Last Updated 4 ಡಿಸೆಂಬರ್ 2012, 9:50 IST
ಖಾತೆಗೆ ನೇರ ಹಣ: ಸರ್ಕಾರ ಸಮರ್ಥನೆ
ಖಾತೆಗೆ ನೇರ ಹಣ: ಸರ್ಕಾರ ಸಮರ್ಥನೆ   

ನವದೆಹಲಿ (ಪಿಟಿಐ): `ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಲ್ಲ ಎಂದು ಸ್ಪಷ್ಟಪಡಿಸಿರುವ ಸರ್ಕಾರ ಈ ಸಂಬಂಧ ಚುನಾವಣಾ ಆಯೋಗಕ್ಕೆ ಸಮಗ್ರವಾಗಿ ಉತ್ತರ ನೀಡಿದೆ.

ಈ ಹಿಂದೆ ಪ್ರಣವ್ ಮುಖರ್ಜಿ ಅವರು ಹಣಕಾಸು ಸಚಿವರಾಗಿದ್ದಾಗ ಮಂಡಿಸಿದ ಬಜೆಟ್‌ನಲ್ಲೇ ಈ ಯೋಜನೆ ಘೋಷಿಸಲಾಗಿದೆ. ಹಾಗಾಗಿ ಇದೇನು ಹೊಸದಾಗಿ ಪ್ರಕಟಿಸಿದ ಯೋಜನೆ ಅಲ್ಲವಾದ್ದರಿಂದ ಬಿಜೆಪಿ ಆರೋಪಿಸಿದಂತೆ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಎನಿಸುವುದಿಲ್ಲ ಎಂದು ಸರ್ಕಾರ ಯೋಜನಾ ಆಯೋಗದ ಮೂಲಕ ಸ್ಪಷ್ಟಪಡಿಸಿದೆ.

ಬಿಜೆಪಿ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಈ ಸಂಬಂಧ ಸರ್ಕಾರ ಸೋಮವಾರ ಸಂಜೆ 5ರೊಳಗೆ ತನ್ನ ಉತ್ತರ ಸಲ್ಲಿಸಬೇಕು ಇಲ್ಲದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಎಚ್ಚರಿಕೆ ನೀಡಿತ್ತು. ಯೋಜನಾ ಆಯೋಗದ ಸಹಕಾರದಿಂದ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಸಂದಾಯ ಮಾಡುವ ಕುರಿತು ಕಳೆದ ಬಜೆಟ್ ಭಾಷಣದಲ್ಲಿ ಪ್ರಕಟಿಸಲಾದ ಯೋಜನೆಯ ಕುರಿತಾದ ಸಮಗ್ರ ಮಾಹಿತಿಯನ್ನು ಸರ್ಕಾರ ಸಲ್ಲಿಸಿದೆ.

ADVERTISEMENT

ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರನ್ನು ಒಳಗೊಂಡ ಮೂವರ ಆಯೋಗ ಸರ್ಕಾರ ನೀಡಿದ ಮಾಹಿತಿಯನ್ನು ಪರಾಮರ್ಶಿಸಿದ್ದು ಈ ಸಂಬಂಧದ ನಿರ್ಧಾರವನ್ನು ನಂತರ ಪ್ರಕಟಿಸುವುದಾಗಿ ತಿಳಿಸಿದೆ. ಗುಜರಾತ್ ಮತ್ತಿತರ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಫಲಾನುಭವಿಗಳ ಖಾತೆಗೆ ನೇರ ಹಣ ಸಂದಾಯ ಮಾಡುವ ಯೋಜನೆಯನ್ನು ಅನುಷ್ಠಾನ ಮಾಡಲು ಹೊರಟ ಕೇಂದ್ರದ ಧೋರಣೆಗೆ ಆಯೋಗ ಅತೃಪ್ತಿ ವ್ಯಕ್ತಪಡಿಸಿತ್ತು.

ಕೇಂದ್ರದ ಈ ಕ್ರಮ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆಯಾಗಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಒತ್ತಾಯಿಸಿತ್ತು. ಈ ನಡುವೆ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಈ ಯೋಜನೆಯನ್ನು ಈ ಹಿಂದಿನ ಬಜೆಟ್ ಸಮಯದಲ್ಲೇ ಪ್ರಕಟಿಸಿರುವುದರಿಂದ ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಆಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.

ಕಾಂಗ್ರೆಸ್-ಬಿಜೆಪಿ ತಿಕ್ಕಾಟ
ನವದೆಹಲಿ (ಪಿಟಿಐ)
: ಫಲಾನುಭವಿಗಳ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡುವ ಯೋಜನೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಕಾಂಗ್ರೆಸ್, ಈ ಕುರಿತು ಬಿಜೆಪಿ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.

ಇನ್ನೊಂದೆಡೆ ಬಿಜೆಪಿ, ಯೋಜನೆಯನ್ನು ಸಾಕಷ್ಟು ಪೂರ್ವಸಿದ್ಧತೆಯಿಲ್ಲದೆ ಜಾರಿಗೆ ತರಲಾಗುತ್ತಿದ್ದು ಇಂತಹುದೇ ಯೋಜನೆ ರಾಜಸ್ತಾನದಲ್ಲಿ ಯಾಕೆ ಯಶಸ್ವಿಯಾಗಿಲ್ಲ ಎಂದು ಪ್ರಶ್ನಿಸಿದೆ.

`ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಸಂದಾಯ ಮಾಡುವ ವ್ಯವಸ್ಥೆಯಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ. ಆದರೆ ಇಂತಹ ಅತ್ಯುತ್ತಮ ವ್ಯವಸ್ಥೆ ಬೇಕೆ ಬೇಡವೆ ಎಂಬುದರ ಕುರಿತು ಬಿಜೆಪಿ ತನ್ನ ನಿಲುವನ್ನು ಮೊದಲು ಸ್ಪಷ್ಟಪಡಿಸಲಿ' ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಷ್ ತಿವಾರಿ ಸುದ್ದಿಗಾರರಿಗೆ ತಿಳಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಮುಖಂಡ ರವಿಶಂಕರ ಪ್ರಸಾದ್, `ಬಿಜೆಪಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ವಿರುದ್ಧ ಯಾವತ್ತೂ ಇಲ್ಲ, ಆದರೆ ಯೋಜನೆ ಜಾರಿಗೆ ಕಾಂಗ್ರೆಸ್ ಅಗತ್ಯ ಸಿದ್ಧತೆ ಮಾಡಿಕೊಳ್ಳದೆಯೇ ತರಾತುರಿಯಾಗಿ ಜಾರಿಮಾಡಲು ಹೊರಟಿದೆ. ಹೀಗಾಗಿ ನಿಜವಾಗಿ ಕಾಂಗ್ರೆಸ್‌ಗೆ ಈ ಯೋಜನೆ ಬೇಕಿಲ್ಲ' ಎಂದು ಟೀಕಿಸಿದ್ದಾರೆ.

ಇಂತಹುದೇ ಪ್ರಮುಖ ಯೋಜನೆಯನ್ನು ಕಾಂಗ್ರೆಸ್ ಈ ಹಿಂದೆ ರಾಜಸ್ತಾನದಲ್ಲಿ ಪ್ರಕಟಿಸಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ ಎಂದಿರುವ ಪ್ರಸಾದ್, ಈ ಕುರಿತು ಕಾಂಗ್ರೆಸ್ ಉತ್ತರ ನೀಡಬೇಕು ಎಂದಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.